
ಮುಂಬೈ: ಮಹಾರಾಷ್ಟ್ರದ ನಾಸಿಕ್ ನಲ್ಲಿ ಚಲಿಸುತ್ತಿದ್ದ ರೈಲಿನಲ್ಲಿ ವೃದ್ಧನ ಮೇಲೆ ಹಲ್ಲೆ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ, ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ ಕೆಲವೇ ಗಂಟೆಗಳಲ್ಲಿ ಅವರಿಗೆ ಜಾಮೀನು ನೀಡಿ ಬಿಡುಗಡೆ ಮಾಡಲಾಗಿದೆ.
ನಾಸಿಕ್ ನಲ್ಲಿ ಚಲಿಸುತ್ತಿದ್ದ ರೈಲಿನಲ್ಲಿ ಹಾಜಿ ಅಶ್ರಫ್ ಮಣಿಯಾರ್ ಎಂಬ ಹಿರಿಯ ಮುಸ್ಲಿಂ ವ್ಯಕ್ತಿಯ ಮೇಲೆ ಗೋಮಾಂಸ ಸಾಗಾಟ ಆರೋಪ ಹೊರಿಸಿ ಹಲ್ಲೆ ನಡೆಸಲಾಗಿತ್ತು. ಈ ಕುರಿತ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗಿತ್ತು.
ಇದರ ಬೆನ್ನಲ್ಲೇ ಈ ಪ್ರಕರಣ ಸಂಬಂಧ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು. ಆದರೆ ಬಂಧನವಾದ ಕೆಲವೇ ಗಂಟೆಗಳಲ್ಲಿ ಬಂಧಿತರೆಲ್ಲರಿಗೂ ಜಾಮೀನು ನೀಡಲಾಗಿದೆ.
ವಿಡಿಯೋ ವೈರಲ್
ಇನ್ನು ವಿಡಿಯೋದಲ್ಲಿರುವಂತೆ ರೈಲಿನಲ್ಲಿದ್ದ ಯುವಕರು ವೃದ್ದನ ಮೇಲೆ ಪೈಶಾಚಿಕ ಹಲ್ಲೆ ನಡೆಸಿದ್ದರು. 70 ವರ್ಷದ ವ್ಯಕ್ತಿಯ ಮೇಲೆ ಕ್ರೂರವಾಗಿ ಹಲ್ಲೆ ನಡೆಸುವುದು, ಅವಾಚ್ಯ ಶಬ್ದಗಳಿಂದ ನಿಂದಿಸುವುದು ಮತ್ತು ಬೆದರಿಕೆಗಳನ್ನು ಹಾಕುವುದು ಕಂಡುಬಂದಿದೆ. ಅಲ್ಲದೆ ಚಲಿಸುತ್ತಿದ್ದ ರೈಲಿನಿಂದ ಹೊರಗೆ ಹಾಕುವುದಾಗಿ ಬೆದರಿಸಿದ್ದಾರೆ.
ಗೋಮಾಂಸ ಸಾಗಾಟ ಆರೋಪ
ಸಂತ್ರಸ್ಥ ವೃದ್ಧ ಹಾಜಿ ಅಶ್ರಫ್ ಮಣಿಯಾರ್ ತಮ್ಮ ಬ್ಯಾಗಿನಲ್ಲಿ ಗೋಮಾಂಸ ಸಾಗಾಟ ಮಾಡುತ್ತಿದ್ದಾರೆ ಎಂದು ಆರೋಪಿಸಿ ಹಲ್ಲೆ ಮಾಡಲಾಗಿತ್ತು. ಅಲ್ಲದೆ ಹಲ್ಲೆಯನ್ನು ಮೊಬೈಲ್ ನಲ್ಲಿ ಸೆರೆಹಿಡಿದಿದ್ದರು. ಇದೀಗ ಇದೇ ವಿಡಿಯೋ ಹಲ್ಲೆಕೋರರ ಬಂಧನಕ್ಕೆ ಕಾರಣವಾಗಿದೆ.
ಇನ್ನು ಸಂತ್ರಸ್ಥ ವೃದ್ಧ ಹಾಜಿ ಅಶ್ರಫ್ ಮಣಿಯಾರ್ ದೂರಿನ ಮೇರೆಗೆ ಥಾಣೆ ಸರ್ಕಾರಿ ರೈಲ್ವೆ ಪೊಲೀಸರು (ಜಿಆರ್‌ಪಿ) ಪ್ರಕರಣದಲ್ಲಿ ಎಫ್‌ಐಆರ್ ದಾಖಲಿಸಿ ಇಂದು ಆರೋಪಿಗಳನ್ನು ಬಂಧಿಸಿದ್ದರು. ಆದರೆ ಎಫ್ ಐಆರ್ ನಲ್ಲಿ ಪೊಲೀಸರು ದ್ವೇಷದ ಅಪರಾಧ, ಗುಂಪು ದಾಳಿ, ದರೋಡೆ ಮತ್ತು ಕೊಲೆ ಯತ್ನದ ಆರೋಪಗಳನ್ನು ಸೇರಿಸಲು ನಿರಾಕರಿಸಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಪೊಲೀಸರ ಈ ಕ್ರಮವೇ ನ್ಯಾಯಾಲಯವು ಆರೋಪಿಗಳಿಗೆ ಕೇವಲ 15,000 ರೂ.ಗಳ ಜಾಮೀನು ಮೊತ್ತವನ್ನು ನಿಗದಿಪಡಿಸಿ ಜಾಮೀನು ನೀಡಿದೆ ಎಂದು ಹೇಳಲಾಗಿದೆ. ಇದಲ್ಲದೆ, ಅಪರಾಧದಲ್ಲಿ ಭಾಗಿಯಾಗಿರುವ ಇತರೆ ಆರೋಪಿಗಳು ತಲೆಮರೆಸಿಕೊಂಡಿದ್ದಾರೆ.
ಮಾಧ್ಯಮ ವರದಿಗಳ ಪ್ರಕಾರ, ಪ್ರಮುಖ ಆರೋಪಿಗಳಲ್ಲಿ ಒಬ್ಬನನ್ನು ಎಸ್‌ಆರ್‌ಪಿಎಫ್ (ವಿಶೇಷ ಮೀಸಲು ಪೊಲೀಸ್ ಪಡೆ) ಅಧಿಕಾರಿಯ ಪುತ್ರ ಆಶು ಅವ್ಹಾದ್ ಎಂದು ಗುರುತಿಸಲಾಗಿದೆ. ದಾಳಿಯಲ್ಲಿ ಭಾಗಿಯಾಗಿರುವ ಯುವಕರ ಗುಂಪು ಪೊಲೀಸ್ ನೇಮಕಾತಿ ಪರೀಕ್ಷೆಗೆ ಹಾಜರಾಗಲು ಮುಂಬೈಗೆ ಪ್ರಯಾಣಿಸುತ್ತಿದ್ದರು ಎನ್ನಲಾಗಿದೆ.
Advertisement