ಜಮ್ಮು: ಜಮ್ಮು ಮತ್ತು ಕಾಶ್ಮೀರದ ಸುಂಜವಾನ್ ಸೇನಾ ಶಿಬಿರದ ಸೆಂಟ್ರಿ ಪೋಸ್ಟ್ ಮೇಲೆ ಶಂಕಿತ ಭಯೋತ್ಪಾದಕರು ಸೋಮವಾರ ಗುಂಡಿನ ದಾಳಿ ನಡೆಸಿದ್ದು, ಘಟನೆಯಲ್ಲಿ ಯೋಧರೊಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.
ದಾಳಿ ನಡೆಸಿದ ಬಂದೂಕುಧಾರಿ ಶಂಕಿತ ಉಗ್ರರನ್ನು ಪತ್ತೆಹಚ್ಚಲು ಮತ್ತು ತಟಸ್ಥಗೊಳಿಸಲು ಭಾರಿ ಶೋಧ ಕಾರ್ಯಾಚರಣೆ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇಂದು ಬೆಳಗ್ಗೆ 10.50ರ ಸುಮಾರಿಗೆ ಜಮ್ಮುವಿನ ಹೊರವಲಯದಲ್ಲಿರುವ ಸುಂಜವಾನ್ ಸೇನಾ ಪೋಸ್ಟ್ ಮೇಲೆ ಹಲವು ಸುತ್ತು ಗುಂಡು ಹಾರಿಸಲಾಗಿದ್ದು, ಯೋಧನಿಗೆ ಗಂಭೀರ ಗಾಯಗಳಾಗಿವೆ ಎಂದು ರಕ್ಷಣಾ ವಕ್ತಾರರು ತಿಳಿಸಿದ್ದಾರೆ.
ಉಗ್ರರಿಗಾಗಿ ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಗಿದೆ ಎಂದು ಸೇನಾ ವಕ್ತಾರರು ಹೇಳಿದ್ದಾರೆ.
ಪರಾರಿಯಾಗುತ್ತಿರುವ ಭಯೋತ್ಪಾದಕರನ್ನು ಬೇಟೆಯಾಡಲು ಆರಂಭಿಸಿರುವ ಬೃಹತ್ ಶೋಧ ಕಾರ್ಯಾಚರಣೆಗೆ ಸಾಥ್ ನೀಡಲು ಸ್ಥಳೀಯ ಪೊಲೀಸರ ವಿಶೇಷ ಕಾರ್ಯಾಚರಣೆ ಪಡೆ(ಎಸ್‌ಒಜಿ) ಘಟನಾ ಸ್ಥಳಕ್ಕೆ ಧಾವಿಸಿದೆ.
ಶೋಧ ಕಾರ್ಯಾಚರಣೆ ಮುಂದುವರಿದಿದೆ. ಆದರೆ ಇದುವರೆಗೆ ಭಯೋತ್ಪಾದಕರು ಪತ್ತೆಯಾಗಿಲ್ಲ ಎಂದು ಅಧಿಕಾರಿಗಳು
ತಿಳಿಸಿದ್ದಾರೆ.
Advertisement