
ಬಹ್ರೈಚ್: ಉತ್ತರ ಪ್ರದೇಶದ ಬಹ್ರೈಚ್ ಜಿಲ್ಲೆಯ ಮಹ್ಸಿ ವಿಭಾಗದಲ್ಲಿ ಪ್ರತ್ಯೇಕ ತೋಳ ದಾಳಿಯ ಘಟನೆಗಳಲ್ಲಿ 2.5 ವರ್ಷದ ಬಾಲಕಿ ಸಾವನ್ನಪ್ಪಿದ್ದು, 70 ವರ್ಷದ ಮಹಿಳೆ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.
ಭಾನುವಾರ ರಾತ್ರಿ ಹಾರ್ಡಿ ಪ್ರದೇಶದ ಗರೇತಿ ಗುರುದತ್ ಸಿಂಗ್ ಗ್ರಾಮದಲ್ಲಿ ಮೊದಲ ಘಟನೆ ನಡೆದಿದ್ದು, ತನ್ನ ತಾಯಿಯೊಂದಿಗೆ ಮನೆಯ ಹೊರಗೆ ಮಲಗಿದ್ದ ಅಂಜಲಿಯನ್ನು ತೋಳವೊಂದು ಎತ್ತಿಕೊಂಡು ಹೋಗಿದ್ದು, ಮಗುವಿನ ವಿಕೃತ ದೇಹವು ಗ್ರಾಮದಿಂದ 1 ಕಿಮೀ ದೂರದಲ್ಲಿ ಪತ್ತೆಯಾಗಿದೆ. ತೋಳವು ಆಕೆಯ ಎರಡೂ ಕೈಗಳನ್ನು ತಿಂದಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಇದು ಜುಲೈ 17 ರಿಂದ ತೋಳಗಳ ದಾಳಿಯಿಂದ ಸಾವನ್ನಪ್ಪಿದ ಎಂಟನೇ ಘಟನೆಯಾಗಿದೆ. ಈ ದಾಳಿಯಲ್ಲಿ ಏಳು ಮಕ್ಕಳು ಸೇರಿದಂತೆ ಎಂಟು ಜನರು ಸಾವನ್ನಪ್ಪಿದ್ದಾರೆ ಮತ್ತು ಸುಮಾರು 30 ಮಂದಿ ಗಾಯಗೊಂಡಿದ್ದಾರೆ ಎಂದು ಜಿಲ್ಲಾ ಮ್ಯಾಜಿಸ್ಟ್ರೇಟ್ ಮೋನಿಕಾ ರಾಣಿ ಮಾಹಿತಿ ನೀಡಿದ್ದಾರೆ.
ಮತ್ತೊಂದು ಘಟನೆಯಲ್ಲಿ, ಬಾರಾಬಿಘಾ ಪ್ರದೇಶದ ಮೌಜಾ ಕೋಟಿಯಾ ಗ್ರಾಮದ ಕಮಲಾ ದೇವಿ ಅವರ ಮನೆಯೊಳಗೆ ಇಂದು ಬೆಳಗ್ಗೆ ತೋಳ ಪ್ರವೇಶಿಸಿ ದಾಳಿ ಮಾಡಿದ್ದರಿಂದ ಗಾಯಗೊಂಡಿದ್ದಾರೆ. ಅವರ ಕುತ್ತಿಗೆ, ಬಾಯಿ ಮತ್ತು ಕಿವಿಗೆ ಗಾಯಗಳಾಗಿದ್ದು, ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ ಮತ್ತು ಆಕೆಯ ಸ್ಥಿತಿ ಸ್ಥಿರವಾಗಿದೆ ಎಂದು ಅಧಿಕಾರಿ ತಿಳಿಸಿದರು.
ನರಭಕ್ಷಕ ತೋಳಗಳನ್ನು ಹಿಡಿಯಲು ಜಿಲ್ಲಾಡಳಿತ ಕೆಲಸ ಮಾಡುತ್ತಿದೆ. ಈಗಾಗಲೇ ನಾಲ್ಕು ತೋಳಗಳನ್ನು ಸೆರೆ ಹಿಡಿಯಲಾಗಿದೆ. ಆದರೆ ನೂರಕ್ಕೂ ಹೆಚ್ಚು ಕಂದಾಯ ಗ್ರಾಮಗಳಿದ್ದು, ನಾಲ್ಕೈದು ದಿನಗಳ ಅವಧಿಯಲ್ಲಿ ತೋಳಗಳು ಹೊಸ ಗ್ರಾಮಗಳ ಮೇಲೆ ದಾಳಿ ಮಾಡುತ್ತಿವೆ. ಬಾಗಿಲು ಮುಚ್ಚಿ ಅಥವಾ ಮೇಲ್ಛಾವಣಿ ಮೇಲೆ ಮಲಗಲು ಮತ್ತು ಎಚ್ಚರವಾಗಿರಲು ಜನರಿಗೆ ಅರಿವು ಮೂಡಿಸಲಾಗುತ್ತಿದೆ ಎಂದು ರಾಣಿ ಹೇಳಿದರು.
ಇಲ್ಲಿಯವರೆಗೂ ಎರಡು ತೋಳಗಳು ದಾಳಿ ನಡೆಸುತ್ತಿರುವ ಬಗ್ಗೆ ವರದಿಯಾಗುತ್ತಿದ್ದರೂ ಅರಣ್ಯ ಇಲಾಖೆ ವಿಶೇಷ ಮಾಹಿತಿ ಕಲೆಹಾಕುತ್ತಿದೆ. ತನಿಖೆ ಪೂರ್ಣಗೊಂಡ ನಂತರ ಸರಿಯಾದ ಸಂಖ್ಯೆಯನ್ನು ಹೇಳಬಹುದುಎಂದು ಅವರು ಹೇಳಿದರು.
Advertisement