ಬಹ್ರೈಚ್: ಕಾಡು ಪ್ರಾಣಿಗಳು ನಾಡಿಗೆ ನುಗ್ಗಿ ರೈತರ ಬೆಳೆಗಳಿಗೆ, ಜನರ ಜೀವಕ್ಕೆ ಹಾನಿಯುಂಟುಮಾಡುವುದನ್ನು ತಡೆಯಲು ಹಳ್ಳಿಗಳಲ್ಲಿ ಜನರು ನಾನಾ ತಂತ್ರಗಳ ಮೊರೆ ಹೋಗುವುದನ್ನು ನೋಡಿರುತ್ತೇವೆ. ಉತ್ತರ ಪ್ರದೇಶದ ಬಹ್ರೈಚ್ ಜಿಲ್ಲೆಯಲ್ಲಿ ತೋಳಗಳನ್ನು ಹಿಡಿಯುವ ನಿಟ್ಟಿನಲ್ಲಿ ಇಲ್ಲಿನ ಅರಣ್ಯ ಇಲಾಖೆಯು ಮಕ್ಕಳ ಮೂತ್ರದಲ್ಲಿ ಅದ್ದಿದ ಬಣ್ಣಬಣ್ಣದ ಟೆಡ್ಡಿ ಗೊಂಬೆಗಳನ್ನು ಬಳಸುತ್ತಿದ್ದಾರೆ.
ಕಳೆದ ಕೆಲವು ತಿಂಗಳುಗಳಿಂದ, ಬಹ್ರೈಚ್ ಪ್ರದೇಶದಲ್ಲಿ ಮಕ್ಕಳು ಮತ್ತು ಗ್ರಾಮಸ್ಥರ ಮೇಲೆ ತೋಳಗಳ ದಾಳಿ ಹೆಚ್ಚಾಗುತ್ತಿದೆ. ಈ ಪರಭಕ್ಷಕಗಳನ್ನು ಸೆರೆಹಿಡಿಯಲು ಅರಣ್ಯ ಇಲಾಖೆಯು ಈಗ ಗಾಢ ಬಣ್ಣದ "ಟೆಡ್ಡಿ ಗೊಂಬೆಗಳನ್ನು" ಇಟ್ಟು ಅದಕ್ಕೆ ತೋಳಗಳು ಬೀಳುವಂತೆ ಉಪಾಯ ಮಾಡುತ್ತಿದೆ.
ಈ ಗೊಂಬೆಗಳನ್ನು ನದಿಯ ದಡದ ಬಳಿ, ತೋಳಗಳು ವಿಶ್ರಾಂತಿ ತೆಗೆದುಕೊಳ್ಳುವ ಸ್ಥಳದಲ್ಲಿ ಮತ್ತು ಗುಹೆಗಳ ಹತ್ತಿರ ಇರಿಸಲಾಗುತ್ತದೆ. ಮನುಷ್ಯನ ವಾಸನೆಯನ್ನು ಹಿಡಿದು ತೋಳಗಳು ಬರಲು ಮಕ್ಕಳ ಮೂತ್ರದಲ್ಲಿ ಗೊಂಬೆಗಳನ್ನು ಅದ್ದಿ ಇಡಲಾಗುತ್ತದೆ.
ತೋಳಗಳು ಸಾಮಾನ್ಯವಾಗಿ ರಾತ್ರಿಯಲ್ಲಿ ಬೇಟೆಯಾಡಿ ಬೆಳಗ್ಗೆ ಹೊತ್ತು ತಮ್ಮ ಗೂಡುಗಳಿಗೆ ಮರಳುತ್ತವೆ. ನಮ್ಮ ತಂತ್ರವು ಅವುಗಳನ್ನು ದಾರಿತಪ್ಪಿಸುವುದು ಮತ್ತು ವಸತಿ ಪ್ರದೇಶಗಳಿಂದ ದೂರ ಬಲೆಗಳು ಅಥವಾ ಪಂಜರಗಳ ಬಳಿಗೆ ಸೆಳೆಯುವುದಾಗಿದೆ ಎಂದು ವಿಭಾಗೀಯ ಅರಣ್ಯಾಧಿಕಾರಿ ಅಜಿತ್ ಹೇಳಿದರು. ಪ್ರತಾಪ್ ಸಿಂಹ ಹೇಳುತ್ತಾರೆ.
ಹಿರಿಯ ಐಎಫ್‌ಎಸ್ ಅಧಿಕಾರಿ ರಮೇಶ್ ಕುಮಾರ್ ಪಾಂಡೆ, ಪ್ರಾಣಿಗಳನ್ನು ಸೆರೆಹಿಡಿಯಲು ವಿವಿಧ ರೀತಿಯ ಆಮಿಷಗಳನ್ನೊಡ್ಡಲಾಗುತ್ತದೆ. ಮೀನುಗಳನ್ನು ಇಡಲಾಗುತ್ತದೆ. ಅರಣ್ಯ ಇಲಾಖೆಯು ಬಳಸುತ್ತಿರುವ ಟೆಡ್ಡಿ ಗೊಂಬೆಗಳನ್ನು ಒಂದು ರೀತಿಯಲ್ಲಿ ತೋಳಗಳನ್ನು ಬಲೆಗೆ ಬೀಳಿಸುವ ತಂತ್ರ ಎನ್ನಬಹುದು.
ಇತ್ತೀಚಿನ ತಿಂಗಳುಗಳಲ್ಲಿ, ಬಹ್ರೈಚ್‌ನ ಮಹ್ಸಿ ತೆಹ್ಸಿಲ್‌ನಲ್ಲಿ ತೋಳಗಳ ಗುಂಪು ಆಕ್ರಮಣ ಮಾಡಿ ಜುಲೈ 17 ರಿಂದ ಆರು ಮಕ್ಕಳು ಮತ್ತು ಒಬ್ಬ ಮಹಿಳೆಯನ್ನು ಕೊಂದಿದೆ ಮತ್ತು ಹಲವಾರು ಗ್ರಾಮಸ್ಥರನ್ನು ಗಾಯಗೊಳಿಸಿದೆ. ಆರು ತೋಳಗಳ ಪೈಕಿ ನಾಲ್ಕು ತೋಳಗಳನ್ನು ಸೆರೆಹಿಡಿಯಲಾಗಿದೆ, ಆದರೆ ಎರಡು ತೋಳಗಳು ತಪ್ಪಿಸಿಕೊಂಡಿದ್ದು ಅವುಗಳನ್ನು ಹಿಡಿಯುವ ಪ್ರಯತ್ನ ಮುಂದುವರಿದಿದೆ. ಅರಣ್ಯ ಇಲಾಖೆಯು ಥರ್ಮಲ್ ಮತ್ತು ರೆಗ್ಯುಲರ್ ಡ್ರೋನ್‌ಗಳನ್ನು ಬಳಸಿ ಈ ತೋಳಗಳನ್ನು ಹುಡುಕುತ್ತಿದೆ.
Advertisement