ಕೋಲ್ಕತ್ತಾ: ಕೋಲ್ಕತ್ತಾದ ಆರ್ ಜಿ ಕರ್ ಸರ್ಕಾರಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಕಿರಿಯ ವೈದ್ಯೆಯ ಅತ್ಯಾಚಾರ-ಕೊಲೆಗೆ ಸಂಬಂಧಿಸಿದಂತೆ ವೈದ್ಯರು ಮತ್ತು ಹಲವು ಸಂಘಟನೆಗಳ ಪ್ರತಿಭಟನೆಯ ನಡುವೆ, ಬಂಗಾಳಿ ರಂಗಭೂಮಿ ಕಲಾವಿದರೊಬ್ಬರು ತಮ್ಮ ರಾಜ್ಯ ಪ್ರಶಸ್ತಿಗಳನ್ನು ಹಿಂದಿರುಗಿಸಿದ್ದಾರೆ.
ಆರ್‌ಜಿ ಕರ್ ಆಸ್ಪತ್ರೆಯ ಘಟನೆಗೆ ಸಂಬಂಧಿಸಿದಂತೆ ರಾಜ್ಯ-ಸ್ಥಾಪಿತ 'ಅತ್ಯುತ್ತಮ ರಂಗನಿರ್ದೇಶಕ' ಪ್ರಶಸ್ತಿಯನ್ನು ಹಿಂದಿರುಗಿಸುವುದಾಗಿ ಬಿಪ್ಲಬ್ ಬಂಡೋಪಾಧ್ಯಾಯ ಅವರು ಮಂಗಳವಾರ ಘೋಷಿಸಿದ್ದಾರೆ.
ಖ್ಯಾತ ನಾಟಕಕಾರ ಮತ್ತು ನಿರ್ದೇಶಕ ಬಂಡೋಪಾಧ್ಯಾಯ ಅವರಿಗೆ ಈ ವರ್ಷದ ಆರಂಭದಲ್ಲಿ ಪಶ್ಚಿಮ ಬಂಗಾಳ ನಾಟ್ಯ ಅಕಾಡೆಮಿಯಿಂದ 'ಅತ್ಯುತ್ತಮ ರಂಗನಿರ್ದೇಶಕ' ಪ್ರಶಸ್ತಿ ಮತ್ತು 30,000 ರೂ. ನೀಡಲಾಗಿತ್ತು.
ಆಗಸ್ಟ್ 9 ರಂದು ಆರ್ ಜಿ ಕರ್ ಆಸ್ಪತ್ರೆಯಲ್ಲಿ ಮಹಿಳಾ ವೈದ್ಯೆಯ ಅತ್ಯಾಚಾರ ಮತ್ತು ಹತ್ಯೆಯ ನಂತರ ರಾಜ್ಯ ಸರ್ಕಾರ ಮತ್ತು "ಪಕ್ಷಪಾತಿ" ಪೊಲೀಸ್ ಪಡೆ "ಸತ್ಯಗಳನ್ನು ಮರೆಮಾಚಲು" ಬಯಸಿದ್ದವು ಎಂದು ಅವರು ಆರೋಪಿಸಿದ್ದಾರೆ.
ಆರ್ ಜಿ ಕರ್ ಘಟನೆಯ ನಂತರ ರಾಜ್ಯ ಸರ್ಕಾರ ನಡೆದುಕೊಂಡ ರೀತಿ ನನಗೆ ಬೇಸರ ತರಿಸಿದೆ. ಈ ಘಟನೆಯ ನಂತರ ನಾನು ಯಾವುದೇ ರಾಜ್ಯ ಪ್ರಶಸ್ತಿಯನ್ನು ಉಳಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಬಂಡೋಪಾಧ್ಯಾಯ ಹೇಳಿದ್ದಾರೆ.
"ನಾನು ಅಕಾಡೆಮಿಗೆ ಪ್ರಶಸ್ತಿ ಹಿಂದಿರುಗಿಸುವ ನಿರ್ಧಾರದ ಬಗ್ಗೆ ತಿಳಿಸಿದ್ದೇನೆ" ಎಂದು ಅವರು ಸುದ್ದಿಗಾರರಿಗೆ ತಿಳಿಸಿದ್ದಾರೆ.
ಒಂದು ವಾರದ ಹಿಂದೆ, ಮಾಲ್ಡಾ ಜಿಲ್ಲೆಯ ಪ್ರಸಿದ್ಧ ನಾಟಕ ತಂಡ 'ಸಮಬೇತ ಪ್ರಾಯಸ್' ಆರ್ ಜಿ ಕರ್ ಪ್ರಕರಣವನ್ನು ಸರ್ಕಾರ ನಿಭಾಯಿಸುತ್ತಿರುವ ರೀತಿ ಖಂಡಿಸಿ 50,000 ರೂ. ರಾಜ್ಯ ಸರ್ಕಾರದ ಅನುದಾನವನ್ನು ಹಿಂದಿರುಗಿಸುವುದಾಗಿ ಹೇಳಿತ್ತು.
Advertisement