
ಮುಂಬೈ: ಮಹಾರಾಷ್ಟ್ರದ ನಾಸಿಕ್‌ನಲ್ಲಿ ದನದ ಮಾಂಸ ಸಾಗಿಸುತ್ತಿದ್ದಾರೆ ಎಂದು ಆರೋಪಿಸಿ ಚಲಿಸುತ್ತಿದ್ದ ರೈಲಿನಲ್ಲಿ ವೃದ್ಧನ ಮೇಲೆ ಹಲ್ಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತ ಮೂವರು ಆರೋಪಿಗಳ ಜಾಮೀನನ್ನು ಕೆಲವೇ ಗಂಟೆಗಳಲ್ಲಿ ಕೋರ್ಟ್ ರದ್ದುಗೊಳಿಸಿದೆ.
ನಾಸಿಕ್ ನಲ್ಲಿ ಚಲಿಸುತ್ತಿದ್ದ ರೈಲಿನಲ್ಲಿ 72 ವರ್ಷದ ಅಶ್ರಫ್ ಅಲಿ ಸಯ್ಯದ್ ಹುಸೇನ್ ಎಂಬ ಮುಸ್ಲಿಂ ವ್ಯಕ್ತಿಯ ಮೇಲೆ ಗೋಮಾಂಸ ಸಾಗಾಟ ಆರೋಪ ಹೊರಿಸಿ ಹಲ್ಲೆ ನಡೆಸಲಾಗಿತ್ತು. ಈ ಕುರಿತ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗಿತ್ತು.
ಇದರ ಬೆನ್ನಲ್ಲೇ ಈ ಪ್ರಕರಣ ಸಂಬಂಧ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು. ಆದರೆ ಬಂಧನವಾದ ಕೆಲವೇ ಗಂಟೆಗಳಲ್ಲಿ ಬಂಧಿತರೆಲ್ಲರಿಗೂ ಜಾಮೀನು ನೀಡಲಾಗಿತ್ತು. ಜಾಮೀನಿಗೆ ತೀವ್ರ ವಿರೋಧ ವ್ಯಕ್ತವಾಗುತ್ತಿದ್ದಂತೆ ಕೋರ್ಟ್ ಜಾಮೀನು ರದ್ದುಗೊಳಿಸಿ ಆದೇಶ ಹೊರಡಿಸಿದೆ.
ಪ್ರಕರಣ ಸಂಬಂಧ ಮೂವರನ್ನು ಬಂಧಿಸಲಾಗಿದ್ದು, ಇತರ ಮೂವರ ಪತ್ತೆಗಾಗಿ ಸರ್ಕಾರಿ ರೈಲ್ವೆ ಪೊಲೀಸರು(ಜಿಆರ್‌ಪಿ) ಕಾರ್ಯಾಚರಣೆ ಆರಂಭಿಸಿದ್ದಾರೆ.
ಪೊಲೀಸರು ಆರೋಪಿಗಳ ವಿರುದ್ಧ ಡಕಾಯಿತಿ ಮತ್ತು ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಆರೋಪ ಸೇರಿಸಿದ ನಂತರ ನ್ಯಾಯಾಲಯ ಸೋಮವಾರ ಅವರ ಜಾಮೀನನ್ನು ರದ್ದುಗೊಳಿಸಿದೆ.
ಉತ್ತರ ಮಹಾರಾಷ್ಟ್ರದ ಜಲಗಾಂವ್ ಜಿಲ್ಲೆಯ ಅಶ್ರಫ್ ಅಲಿ ಸಯ್ಯದ್ ಹುಸೇನ್ ಅವರ ಮೇಲೆ ಆಗಸ್ಟ್ 28 ರಂದು ಧುಲೆ-ಮುಂಬೈ ಸಿಎಸ್‌ಎಂಟಿ ಎಕ್ಸ್‌ಪ್ರೆಸ್‌ನಲ್ಲಿ ಗೋಮಾಂಸ ಸಾಗಿಸುತ್ತಿದ್ದಾರೆ ಎಂಬ ಶಂಕೆಯ ಮೇಲೆ ಗುಂಪೊಂದು ಅವರ ಮೇಲೆ ಹಲ್ಲೆ ನಡೆಸಿತ್ತು.
ಘಟನೆಯ ವೀಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ಪೊಲೀಸರು ಆಗಸ್ಟ್ 31 ರಂದು ಧುಲೆಯ ಮೂವರು ಆರೋಪಗಿಳಾದ ಆಕಾಶ್ ಅವದ್(30), ನಿತೇಶ್ ಅಹಿರೆ(30) ಮತ್ತು ಜಯೇಶ್ ಮೋಹಿತೆ(21)ಯನ್ನು ಬಂಧಿಸಿದ್ದರು.
ಮರುದಿನ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯ ಅವರಿಗೆ ಜಾಮೀನು ನೀಡಿತ್ತು.
Advertisement