
ಶಿಮ್ಲಾ: ಗ್ಯಾರೆಂಟಿ ಯೋಜನೆಗಳ ಹೊರೆ ಹಿಮಾಚಲ ಪ್ರದೇಶದ ಸರ್ಕಾರಕ್ಕೆ ತಟ್ಟುತ್ತಿದ್ದು, ಇತಿಹಾಸದಲ್ಲೇ ಮೊದಲ ಬಾರಿಗೆ 2 ಲಕ್ಷ ಸರ್ಕಾರಿ ನೌಕರರ ವೇತನ, 1.5 ಲಕ್ಷ ಪಿಂಚಣಿದಾರರ ಪಿಂಚಣಿ ವಿಳಂಬವಾಗಿದೆ.
ಹಿಮಾಚಲ ಪ್ರದೇಶದಲ್ಲಿ ಆರ್ಥಿಕ ಬಿಕ್ಕಟ್ಟು ಉಂಟಾಗಿದ್ದು, ಕೆಲವೇ ದಿನಗಳ ಹಿಂದೆ ಸಿಎಂ ಸುಖ್ವಿಂದರ್ ಸಿಂಗ್ ಸುಖು ತಮ್ಮ ಕ್ಯಾಬಿನೆಟ್ ಸಚಿವರು ಮುಂದಿನ 2 ತಿಂಗಳ ಕಾಲ ವೇತನ ಪಡೆಯುವುದಿಲ್ಲ ಎಂದು ಘೋಷಿಸಿದ್ದರು.
ಹಿಮಾಚಲ ಪ್ರದೇಶಕ್ಕೆ 94,000 ಕೋಟಿ ರೂಪಾಯಿಯಷ್ಟು ಸಾಲದ ಹೊರೆ ಇದ್ದು, ಗ್ಯಾರೆಂಟಿ ಯೋಜನೆಗಳು ಆರ್ಥಿಕ ಹೊರೆಯನ್ನು ಮತ್ತಷ್ಟು ಹೆಚ್ಚಿಸಿವೆ. ಪರಿಣಾಮ ಸರ್ಕಾರಕ್ಕೆ ಈ ಹಿಂದಿನ ಸಾಲವನ್ನೂ ತೀರಿಸಲಾಗದೇ ಹೊಸ ಸಾಲವನ್ನೂ ಪಡೆಯಲಾಗದ ಸ್ಥಿತಿ ನಿರ್ಮಾಣವಾಗಿದೆ.
ರಾಜ್ಯ ಸರ್ಕಾರಕ್ಕೆ 10,000 ಕೋಟಿಯಷ್ಟು ಬಾಧ್ಯತೆಗಳಿದ್ದು ಉದ್ಯೋಗಿಗಳಿಗೆ ಇಂದಿಗೂ ಸಂಬಳ ಮತ್ತು ಪಿಂಚಣಿ ಸಿಗುವ ಸಾಧ್ಯತೆ ಇಲ್ಲ ಎಂದು ಮಾಧ್ಯಮಗಳು ವರದಿ ಮಾಡಿವೆ.
ಸುದ್ದಿಗಾರರೊಂದಿಗೆ ಮಾತನಾಡಿದ ಹಿಮಾಚಲ ಪ್ರದೇಶ ಸರ್ಕಾರಿ ನೌಕರರ ಜಂಟಿ ಸಂಘದ ಜಂಟಿ ಕಾರ್ಯದರ್ಶಿ ಹೀರಾ ಲಾಲ್ ವರ್ಮಾ, ಸರ್ಕಾರಿ ನೌಕರರಿಗೆ ಆರ್ಥಿಕವಾಗಿ ಹೆಚ್ಚು ಪರಿಣಾಮ ಉಂಟಾಗುತ್ತಿದೆ. "ನಾವು ತಿಂಗಳ ಕೊನೆಯವರೆಗೂ ನಮ್ಮ ಸಂಬಳಕ್ಕಾಗಿ ಕಾಯುತ್ತೇವೆ. ಹಣಕಾಸಿನ ಮುಗ್ಗಟ್ಟು ಉಂಟಾದರೆ, ಸರ್ಕಾರವು ಲೋಪದೋಷವನ್ನು ಗಮನಿಸಿ ಸಮಸ್ಯೆಯನ್ನು ಪರಿಹರಿಸಬೇಕು. ವಾರ್ಷಿಕ ಬಜೆಟ್ ರಚನೆಯಾದಾಗ, ಪಿಂಚಣಿ, ವೇತನ, ವೈದ್ಯಕೀಯ ಎಲ್ಲವೂ ಸೇರಿದೆ. ಸರ್ಕಾರ ಈ ಹಣವನ್ನು ಬೇರೆಡೆಗೆ ತಿರುಗಿಸುತ್ತಿದೆಯೇ? ಎಂದು ಪ್ರಶ್ನಿಸಿದ್ದಾರೆ.
ಸಂಬಳವನ್ನು ನಿಲ್ಲಿಸುವುದು ಪ್ರಬುದ್ಧ ನಡೆಯಲ್ಲ ಮತ್ತು ಸೋರಿಕೆಯ ಬಗ್ಗೆ ಸರ್ಕಾರ ತನಿಖೆ ನಡೆಸಬೇಕು ಮತ್ತು ಈ ಬಿಕ್ಕಟ್ಟು ಎಲ್ಲಿಂದ ಬರುತ್ತಿದೆ ಎಂಬುದನ್ನು ನೋಡಬೇಕು ಎಂದು ವರ್ಮಾ ಹೇಳಿದ್ದಾರೆ. ಪ್ರಸ್ತುತ ಬಿಕ್ಕಟ್ಟಿಗೆ ಕಾಂಗ್ರೆಸ್ ಸರ್ಕಾರವನ್ನು ಬಿಜೆಪಿ ದೂಷಿಸಿದರೆ, ಹಿಮಾಚಲ ಮುಖ್ಯಮಂತ್ರಿ ಸುಖವಿಂದರ್ ಸಿಂಗ್ ಸುಖು ಅವರು ಹಿಂದಿನ ಸರ್ಕಾರವು ರಾಜ್ಯದ ಆರ್ಥಿಕತೆಯನ್ನು ತಪ್ಪಾಗಿ ನಿರ್ವಹಿಸಿದ್ದರಿಂದ ಈ ಪರಿಸ್ಥಿತಿ ಉಂಟಾಗಿದೆ ಎಂದು ಪ್ರತ್ಯಾರೋಪ ಮಾಡಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಸುಖು, ಹಿಂದಿನ ಬಿಜೆಪಿ ಸರ್ಕಾರ ಅರ್ಹರಲ್ಲದವರಿಗೂ ಉಚಿತ ವಿದ್ಯುತ್ ಮತ್ತು ನೀರು ನೀಡಿದೆ ಎಂದು ಹೇಳಿದ್ದಾರೆ.
ರಾಜ್ಯದಲ್ಲಿ ಆರ್ಥಿಕ ತುರ್ತು ಪರಿಸ್ಥಿತಿ ಇದೆ ಎಂದು ಮಾಜಿ ಮುಖ್ಯಮಂತ್ರಿ ಜೈರಾಮ್ ಠಾಕೂರ್ ಹೇಳಿದ್ದಾರೆ. ಇಂದು 3ನೇ ದಿನವಾದರೂ ವೇತನವನ್ನು ನೌಕರರ ಖಾತೆಗೆ ಜಮಾ ಮಾಡಿಲ್ಲ, ಪಿಂಚಣಿದಾರರು ತಮ್ಮ ಪಿಂಚಣಿಗಾಗಿ ಕಾಯುತ್ತಿದ್ದಾರೆ ಎಂದು ಠಾಕೂರ್ ಟ್ವೀಟ್ ಮಾಡಿದ್ದಾರೆ. "ಸರ್, ವ್ಯವಸ್ಥೆಯು ಮೊದಲಿನಂತೆಯೇ ಉಳಿಯಲಿ, ಏಕೆಂದರೆ ಜನರು ತಮ್ಮ ಸಂಬಳ, ಪಿಂಚಣಿ, ಚಿಕಿತ್ಸೆ, ಸರ್ಕಾರಿ ಸೌಲಭ್ಯಗಳು, ವೈದ್ಯಕೀಯ ಬಿಲ್‌ಗಳು, ಡಿಎ ಮತ್ತು ಬಾಕಿಗಳನ್ನು ಸಮಯಕ್ಕೆ ಸರಿಯಾಗಿ ಪಡೆಯುತ್ತಿದ್ದರು. ಈ ವ್ಯವಸ್ಥೆಯಲ್ಲಿನ ಬದಲಾವಣೆಯನ್ನು ರಾಜ್ಯವು ಒಪ್ಪುವುದಿಲ್ಲ" ಎಂದು ಠಾಕೂರ್ ಹೇಳಿದ್ದಾರೆ.
Advertisement