
ಥಾಣೆ: ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಬಿಸ್ಕೆಟ್ ಕಾರ್ಖಾನೆಯೊಂದರಲ್ಲಿ ಯಂತ್ರದ ಬೆಲ್ಟ್‌ಗೆ ಸಿಲುಕಿ ಮೂರು ವರ್ಷದ ಬಾಲಕ ಸಾವನ್ನಪ್ಪಿದ್ದಾನೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ. ಸೋಮವಾರ ಅಂಬರನಾಥದಲ್ಲಿ ಈ ಘಟನೆ ನಡೆದಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಅಯುಷ್ ಚೌಹಾಣ್ ಮೃತಪಟ್ಟ ಬಾಲಕನಾಗಿದ್ದಾನೆ. ಟಿಫಿನ್ ಸರಬರಾಜು ಮಾಡುತ್ತಿದ್ದ ತನ್ನ ತಾಯಿ ಜೊತೆಗೆ ಬಿಸ್ಕೆಟ್ ಕಾರ್ಖಾನೆಗೆ ಹೋಗಿದ್ದ ಬಾಲಕ, ಯಂತ್ರದ ಬೆಲ್ಟ್‌ನಿಂದ ಬಿಸ್ಕೆಟ್ ತೆಗೆದುಕೊಳ್ಳಲು ಪ್ರಯತ್ನಿಸಿ ಅದರಲ್ಲಿ ಸಿಲುಕಿದ್ದಾನೆ.
ಕಾರ್ಖಾನೆಯ ಸಿಬ್ಬಂದಿ ಆತನನ್ನು ಹೊರತೆಗೆದು ಹತ್ತಿರದ ಆಸ್ಪತ್ರೆಗೆ ಸಾಗಿಸಿದ್ದಾರೆ. ಅಲ್ಲಿ ಆತ ಸಾವನ್ನಪ್ಪಿರುವುದಾಗಿ ವೈದ್ಯರು ಘೋಷಿಸಿದ್ದಾರೆ ಎಂದು ಅಂಬರನಾಥ್ ಪೊಲೀಸ್ ಠಾಣೆಯ ಅಧಿಕಾರಿ ತಿಳಿಸಿದ್ದಾರೆ.
ಬಳಿಕ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದ್ದು, ಆಕಸ್ಮಿಕ ಸಾವು ಎಂದು ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.
Advertisement