ನವದೆಹಲಿ: ಈಶಾನ್ಯ ಪ್ರದೇಶ ವಿಶೇಷವಾಗಿ ಬುಡಕಟ್ಟು ಜನಾಂಗದವರ ಸಂಸ್ಕೃತಿ, ಭಾಷೆ ಮತ್ತು ಗುರುತನ್ನು ಉಳಿಸಿಕೊಂಡು ಸರ್ವತೋಮುಖ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಬುಧವಾರ ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ಈಶಾನ್ಯ ಮತ್ತು ದೆಹಲಿ ನಡುವಿನ ಅಂತರವನ್ನು ರಸ್ತೆಗಳು, ರೈಲುಗಳು ಮತ್ತು ವಿಮಾನಗಳ ಮೂಲಕ ಸಂಪರ್ಕಿಸುವುದು ಮಾತ್ರವಲ್ಲದೆ ಹೃದಯಗಳ ನಡುವಿನ ಅಂತರವನ್ನು ಕಡಿಮೆ ಮಾಡಿದ್ದಾರೆ ಎಂದು ಕೇಂದ್ರ ಗೃಹ ಸಚಿವರು ತಿಳಿಸಿದ್ದಾರೆ.
ಹಿಂಸಾಚಾರವನ್ನು ಕೊನೆಗೊಳಿಸಿ ಈಶಾನ್ಯ ರಾಜ್ಯದಲ್ಲಿ ಶಾಂತಿ ನೆಲೆಸುವ ಉದ್ದೇಶದಿಂದ ನಾರ್ತ್ ಬ್ಲಾಕ್‌ನಲ್ಲಿ ಕೇಂದ್ರ ಮತ್ತು ತ್ರಿಪುರಾ ಸರ್ಕಾರ ರಾಜ್ಯದ ಎರಡು ಬಂಡುಕೋರ ಗುಂಪುಗಳ ನಡುವೆ ಶಾಂತಿ ಒಪ್ಪಂದಕ್ಕೆ ಸಹಿ ಹಾಕಿದ ಕಾರ್ಯಕ್ರಮವನ್ನು ಉದ್ದೇಶಿಸಿ ಅಮಿತ್ ಶಾ ಮಾತನಾಡಿದರು.
ಒಪ್ಪಂದಕ್ಕೆ ಸಹಿ ಹಾಕುವುದರೊಂದಿಗೆ ಶಾಂತಿ ಮತ್ತು ಪ್ರಗತಿಯತ್ತ ಸಾಗುತ್ತಿರುವ ತ್ರಿಪುರಾದ ಪ್ರಯಾಣದಲ್ಲಿ ಇಂದು ಹೊಸ ಮೈಲಿಗಲ್ಲು ಸ್ಥಾಪಿಸಲಾಗಿದೆ ಎಂದು ಅಮಿತ್ ಶಾ ಹೇಳಿದರು.
ಎನ್‌ಎಲ್‌ಎಫ್‌ಟಿ ಮತ್ತು ಎಟಿಟಿಎಫ್ 35 ವರ್ಷಗಳ ಸುದೀರ್ಘ ಸಂಘರ್ಷವನ್ನು ಕೊನೆಗೊಳಿಸಲು ಮತ್ತು ಮುಖ್ಯವಾಹಿನಿಗೆ ಮರಳಲು ಒಪ್ಪಿಕೊಂಡಿವೆ. ಹಿಂಸಾಚಾರವನ್ನು ತ್ಯಜಿಸಿ ಸಮೃದ್ಧ ಮತ್ತು ಅಭಿವೃದ್ಧಿ ಹೊಂದಿದ ತ್ರಿಪುರವನ್ನು ನಿರ್ಮಿಸಲು ಬದ್ಧವಾಗಿವೆ ಎಂದು ಅಮಿತ್ ಶಾ ತಿಳಿಸಿದ್ದಾರೆ.
ನ್ಯಾಷನಲ್ ಲಿಬರೇಶನ್ ಫ್ರಂಟ್ ಆಫ್ ತ್ರಿಪುರ(NLFT) ಮತ್ತು ಆಲ್ ತ್ರಿಪುರಾ ಟೈಗರ್ ಫೋರ್ಸ್(ಎನ್‌ಎಲ್‌ಎಫ್‌ಟಿ) ಪ್ರತಿನಿಧಿಗಳೊಂದಿಗೆ ಶಾಂತಿ ಒಪ್ಪಂದದ ಜ್ಞಾಪಕ ಪತ್ರಕ್ಕೆ ಸಹಿ ಹಾಕುವ ಸಂದರ್ಭದಲ್ಲಿ ತ್ರಿಪುರ ಮುಖ್ಯಮಂತ್ರಿ ಮಾಣಿಕ್ ಸಹಾ ಮತ್ತು ಗೃಹ ವ್ಯವಹಾರಗಳ ಸಚಿವಾಲಯ(ಎಂಎಚ್‌ಎ)ದ ಅಧಿಕಾರಿಗಳು, ರಾಜ್ಯ ಸರ್ಕಾರದ ಹಿರಿಯ ಅಧಿಕಾರಿಗಳು ಸಹ ಉಪಸ್ಥಿತರಿದ್ದರು.
Advertisement