ಕೊಹಿಮಾ: ಕರ್ನಾಟಕದ ಶಿರೂರು ಮಾದರಿಯಲ್ಲೇ ನಾಗಾಲ್ಯಾಂಡ್ ನಲ್ಲೂ ಭೀಕರ ಭೂಕುಸಿತ ಸಂಭವಿಸಿದ್ದು, ರಾಷ್ಟ್ರೀಯ ಹೆದ್ದಾರಿ 29ರಲ್ಲಿ ಸಂಭವಿಸಿದ ದುರಂತದಲ್ಲಿ ಕನಿಷ್ಠ 6 ಮಂದಿ ಸಾವಿಗೀಡಾಗಿದ್ದಾರೆ ಎಂದು ತಿಳಿದುಬಂದಿದೆ.
ನಾಗಾಲ್ಯಾಂಡ್‌ನಲ್ಲಿ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದ ರಾಷ್ಟ್ರೀಯ ಹೆದ್ದಾರಿ 29 ರಲ್ಲಿ ಮಂಗಳವಾರ ರಾತ್ರಿ ಭೂಕುಸಿತ ಉಂಟಾಗಿದ್ದು, ಈ ಭೀಕರ ಘಟನೆಯಲ್ಲಿ ಆರು ಜನರು ಸಾವನ್ನಪ್ಪಿದ್ದಾರೆ. ಹೆದ್ದಾರಿಯ ಹಲವು ಕಡೆ ಭೂಕುಸಿತ ಸಂಭವಿಸಿದ್ದು, ಇಡೀ ರಸ್ತೆಯೇ ಕೊಚ್ಚಿಕೊಂಡು ಹೋಗಿದೆ.
ಪರಿಣಾಮ ವಾಣಿಜ್ಯ ಕೇಂದ್ರಗಳಾದ ದಿಮಾಪುರ್ ಮತ್ತು ರಾಜ್ಯ ರಾಜಧಾನಿ ಕೊಹಿಮಾ ನಡುವಿನ ರಸ್ತೆ ಸಂಪರ್ಕ ಸ್ಥಗಿತಗೊಂಡಿದೆ. ಅಲ್ಲದೆ ಹೆದ್ದಾರಿ ರಸ್ತೆ ಬದಿಯಲ್ಲಿದ್ದ ಹಲವಾರು ಮನೆಗಳು ಮತ್ತು ರಸ್ತೆ ಬದಿಯ ಹೊಟೆಲ್ ಗಳು ಮತ್ತು ಇತರೆ ಕಟ್ಟಡಗಳಿಗೂ ಭೂ ಕುಸಿತದಿಂದಾಗಿ ಹಾನಿಯಾಗಿದೆ.
ಘಟನೆಯಿಂದ ನೂರಾರು ವಾಹನಗಳು ಜಖಂಗೊಂಡಿದ್ದು, ಅನಾಹುತದ ತೀವ್ರತೆಯನ್ನು ಗಮನಿಸಿದರೆ ರಸ್ತೆಯನ್ನು ತೆರವುಗೊಳಿಸಲು ತುಂಬಾ ಸಮಯ ಹಿಡಿಯಲಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ವಿಚಾರ ತಿಳಿಯುತ್ತಲೇ ಸ್ಥಳಕ್ಕೆ ದೌಡಾಯಿಸಿರುವ ಅಧಿಕಾರಿಗಳು ಮತ್ತು ರಕ್ಷಣಾ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ಅವಶೇಷಗಳಡಿ ಸಿಲುಕಿರುವವರಿಗಾಗಿ ಕಾರ್ಯಾಚರಣೆ ನಡೆಸಲಾಗುತ್ತಿದೆ.
ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿರುವ ನಾಗಾಲ್ಯಾಂಡ್ ಮುಖ್ಯಮಂತ್ರಿ ನೆಫಿಯು ರಿಯೊ, 'ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿದ್ದು ಪರಿಸ್ಥಿತಿಯನ್ನು ಅವಲೋಕಿಸುತ್ತಿದ್ದಾರೆ. ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗಿದ್ದು, ಎಲ್ಲ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ.
ಅಂತೆಯೇ ಇದೇ ವಿಚಾರವಾಗಿ ಟ್ವೀಟ್ ಮಾಡಿರುವ ಅವರು, 'ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ NH-29 ನಲ್ಲಿ ದೊಡ್ಡ ಪ್ರಮಾಣದ ವಿನಾಶ ಸಂಭವಿಸಿದ್ದು, ಇದರಿಂದ ನಾನು ತೀವ್ರ ಕಳವಳಗೊಂಡಿದ್ದೇನೆ. ಅಧಿಕಾರಿಗಳು ಸ್ಥಳದಲ್ಲಿಯೇ ಪರಿಸ್ಥಿತಿಯನ್ನು ನಿರ್ಣಯಿಸುತ್ತಿದ್ದು, ಸಂತ್ರಸ್ಥರಿದೆ ಸಹಾಯ ಮಾಡುತ್ತಿದ್ದಾರೆ. ರಾಜ್ಯ ಸರ್ಕಾರವು ತಕ್ಷಣದ ಕ್ರಮಗಳಿಗಾಗಿ ಕೇಂದ್ರ ಸರ್ಕಾರ ಮತ್ತು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದೊಂದಿಗೆ ನಿರಂತರ ಸಂಪರ್ಕದಲ್ಲಿದೆ. ಸಾಧ್ಯವಾದಷ್ಟು ಬೇಗ ಹೆದ್ದಾರಿಯನ್ನು ಸಹಜ ಸ್ಥಿತಿ ತರಲು ಪ್ರಯತ್ನಿಸಲಾಗುತ್ತಿದೆ. ಸಂತ್ರಸ್ಥರ ರಕ್ಷಣೆಗೆ ಸರ್ಕಾರ ಬದ್ಧವಾಗಿದೆ ಎಂದು ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.
ಕರ್ನಾಟಕದ ಶಿರೂರು ಘಟನೆ ನೆನಪಿಸಿದ ದುರಂತ
ಇನ್ನು ನಾಗಾಲ್ಯಾಂಡ್ ನಲ್ಲಿ ನಡೆದ ಭೂಕುಸಿತ ಪ್ರಕರಣ ಕರ್ನಾಟಕದ ಶಿರೂರು ಘಟನೆ ನೆನಪಿಸಿವಂತಿದ್ದು, ಫೆರಿಮಾ, ತ್ಸೀಪಾಮಾ/ಪಿಫೆಮಾ ಮತ್ತು NH 29 (ಪಗಲಾ ಪಹಾರ್/ನ್ಯೂ ಚುಮೌಕೆಡಿಮಾ) ನಲ್ಲಿ ಭೂ ಕುಸಿತ ಸಂಭವಿಸಿದೆ. ಭೂಕುಸಿತದಿಂದಾಗಿ ರಸ್ತೆಯ ಸಂಪೂರ್ಣ ಭಾಗ ಕೊಚ್ಚಿಕೊಂಡು ಹೋಗಿದೆ. ಕೊಹಿಮಾ ಮತ್ತು ದಿಮಾಪುರ್ ನಡುವಿನ ಎಲ್ಲಾ ರೀತಿಯ ವಾಹನ ಸಂಚಾರವನ್ನು ನಿರ್ಬಂದಿಸಲಾಗಿದೆ.
ವಾಹನ ಸವಾರರಿಗೆ ಪರ್ಯಾಯ ಮಾರ್ಗ ಅನುಸರಿಸುವಂತೆ ಸೂಚನೆ ನೀಡಲಾಗಿದೆ. ನಿಯುಲ್ಯಾಂಡ್-ಕೊಹಿಮಾ ಮೂಲಕ ಝಾಡಿಮಾ ರಸ್ತೆಯನ್ನು ಲಘು ಮೋಟಾರು ವಾಹನಗಳು ಮಾತ್ರ ಬಳಸಬಹುದಾಗಿದೆ. ಈ ಮಾರ್ಗದಲ್ಲಿ ಯಾವುದೇ ಭಾರೀ ವಾಹನಗಳು ಸಂಚರಿಸಲು ಅವಕಾಶ ನೀಡಬಾರದು ಎಂದು ಅಧಿಕಾರಿಗಳು ಸೂಚಿಸಿದ್ದಾರೆ.
ಈ ಹವಾಮಾನ ಪರಿಸ್ಥಿತಿಯಲ್ಲಿ ನಾಗರಿಕರು ತೀವ್ರ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವಂತೆ ಮತ್ತು ಅದಕ್ಕೆ ಅನುಗುಣವಾಗಿ ತಮ್ಮ ಪ್ರಯಾಣವನ್ನು ಯೋಜಿಸಲು ಸರ್ಕಾರ ವಿನಂತಿಸಿದೆ.
ಅಂದಹಾಗೆ ಈ ರಾಷ್ಟ್ರೀಯ ಹೆದ್ದಾರಿ 29 ಮಣಿಪುರಕ್ಕೆ ಸಂಪರ್ಕ ಕಲ್ಪಿಸುತ್ತದೆ. ನಾಗಾಲ್ಯಾಂಡ್ ರಾಜ್ಯವು ತನ್ನ ಪೂರೈಕೆಗಾಗಿ ಇದೇ ಹೆದ್ದಾರಿಯನ್ನು ಅವಲಂಬಿತವಾಗಿದೆ.
Advertisement