Assam: 2,200 ಕೋಟಿ ರೂ. ಆನ್‌ಲೈನ್ ಟ್ರೇಡಿಂಗ್ ಹಗರಣ ಭೇದಿಸಿದ ಪೊಲೀಸರು; 38 ಮಂದಿ ಬಂಧನ!
ಗುವಾಹಟಿ: ಅಸ್ಸಾಂ ಪೊಲೀಸರು 2,200 ಕೋಟಿ ರೂಪಾಯಿ ಹಗರಣವನ್ನು ಬಯಲಿಗೆಳೆದಿದ್ದಾರೆ. ಹಣವನ್ನು ದ್ವಿಗುಣಗೊಳಿಸುವ ಹೆಸರಲ್ಲಿ ಜನರನ್ನು ವಂಚಿಸಿದ್ದ 38 ಮಂದಿಯನ್ನು ಬಂಧಿಸಿದ್ದಾರೆ. ನಕಲಿ ಆನ್‌ಲೈನ್ ಷೇರು ಮಾರುಕಟ್ಟೆಯಲ್ಲಿ ಹಣವನ್ನು ಹೂಡಿಕೆ ಮಾಡಿ ವಂಚಿಸುತ್ತಿದ್ದರು ಎಂದು ಆರೋಪಿಸಲಾಗಿದೆ.
ಸೆಬಿ ಅಥವಾ ಆರ್‌ಬಿಐ ಮಾರ್ಗಸೂಚಿಗಳನ್ನು ಅನುಸರಿಸದೆ ಅನೇಕ ಆನ್‌ಲೈನ್ ವ್ಯಾಪಾರ ಸಂಸ್ಥೆಗಳು ಅಸ್ಸಾಂನಲ್ಲಿ ವ್ಯವಹಾರ ನಡೆಸುತ್ತಿವೆ ಎಂದು ಕೆಲವು ವರದಿಗಳು ಬಿತ್ತರಗೊಂಡ ಬೆನ್ನಲ್ಲೇ ಈ ಬಂಧನಗಳು ನಡೆದಿವೆ. ಇನ್ನು ಮೋಸದ ಆನ್‌ಲೈನ್ ಷೇರು ಮಾರುಕಟ್ಟೆಗಳಲ್ಲಿ ಹೂಡಿಕೆ ಮಾಡುವುದನ್ನು ತಪ್ಪಿಸುವಂತೆ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಜನರನ್ನು ಕೇಳಿಕೊಂಡಿದ್ದಾರೆ. ಯಾವುದೇ ಶ್ರಮವಿಲ್ಲದೆ ಹಣವನ್ನು ದ್ವಿಗುಣಗೊಳಿಸುವ ಯೋಜನೆಗಳು ಹೆಚ್ಚಾಗಿ ವಂಚನೆಯಾಗುತ್ತವೆ ಎಂದು ಅವರು ಹೇಳಿದರು.
ಈ ಆನ್‌ಲೈನ್ ಟ್ರೇಡಿಂಗ್ ಸಂಸ್ಥೆಗಳ ಮೂಲಕ ಷೇರು ಮಾರುಕಟ್ಟೆಯಲ್ಲಿ ಹಣ ಹೂಡುವ ವ್ಯವಸ್ಥೆ ಇಲ್ಲ ಎಂದು ಜನರಿಗೆ ಹೇಳಬಯಸುತ್ತೇನೆ. ವಂಚಕರು ಎಲ್ಲರನ್ನು ದಾರಿ ತಪ್ಪಿಸುತ್ತಿದ್ದಾರೆ. ವಂಚಕರಿಂದ ದೂರವಿರಿ ಎಂದು ಮನವಿ ಮಾಡುತ್ತೇನೆ. ಈಗ ಪೊಲೀಸರು ಅಕ್ರಮ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ರಾಜ್ಯದಲ್ಲಿನ ಸಂಪೂರ್ಣ ದಂಧೆಯನ್ನು ಭೇದಿಸಲು ಪ್ರಯತ್ನಿಸುತ್ತೇವೆ. ರಾಜ್ಯದಲ್ಲಿ ಅಕ್ರಮ ಆನ್‌ಲೈನ್ ಟ್ರೇಡಿಂಗ್ ವಿರುದ್ಧ ಪೊಲೀಸರು ಕ್ರಮ ಕೈಗೊಂಡಿದ್ದಾರೆ ಎಂದು ಹೇಳಿದರು.
ಪೊಲೀಸರು ಪ್ರಮುಖವಾಗಿ ದಿಬ್ರುಗಢ್‌ನ 22 ವರ್ಷದ ಆನ್‌ಲೈನ್ ಉದ್ಯಮಿ ವಿಶಾಲ್ ಫುಕನ್ ಮತ್ತು ಗುವಾಹಟಿಯ ಸ್ವಪ್ನಿಲ್ ದಾಸ್ ಬಂಧಿಸಿದ್ದಾರೆ. ಜನರನ್ನು ಆಕರ್ಷಿಸಲು ಫುಕನ್ ತನ್ನ ಅದ್ದೂರಿ ಜೀವನಶೈಲಿಯನ್ನು ಬಳಸುತ್ತಿದ್ದನು. ತನ್ನ ಹೂಡಿಕೆದಾರರಿಗೆ 60 ದಿನಗಳಲ್ಲಿ ತಮ್ಮ ಹೂಡಿಕೆಯ ಮೇಲೆ ಶೇಕಡ 30ರಷ್ಟು ಆದಾಯದ ಭರವಸೆ ನೀಡಿದ್ದನು ಎಂದು ಪೊಲೀಸರು ತಿಳಿಸಿದ್ದಾರೆ.
ವಿಶಾಲ್ ಫುಕನ್ ನಾಲ್ಕು ನಕಲಿ ಕಂಪನಿಗಳನ್ನು ಸ್ಥಾಪಿಸಿದ್ದು ಹಣವನ್ನು ಅಸ್ಸಾಮಿ ಚಲನಚಿತ್ರೋದ್ಯಮದಲ್ಲಿ ಹೂಡಿಕೆ ಮಾಡಿದರು.