ನಿವಿನ್ ಪೌಲಿ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲು: ಆರೋಪ ನಿರಾಧಾರ ಎಂದ 'ಪ್ರೇಮಂ' ನಟ
ಕೊಚ್ಚಿ: ಲೈಂಗಿಕ ದೌರ್ಜನ್ಯ ಆರೋಪದಡಿ ಮಹಿಳೆಯೊಬ್ಬರು ನೀಡಿದ ದೂರಿನ ಮೇರೆಗೆ ಕೇರಳ ಪೊಲೀಸರು ಮಂಗಳವಾರ ಜನಪ್ರಿಯ ಮಲಯಾಳಂ ನಟ ನಿವಿನ್ ಪೌಲಿ, ನಿರ್ಮಾಪಕ ಎಕೆ ಸುನೀಲ್ ಮತ್ತು ಇತರ ನಾಲ್ವರ ವಿರುದ್ಧ ಸೆಕ್ಷನ್ 376 (ಅತ್ಯಾಚಾರ) ಮತ್ತು ಇತರ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ದೂರು ಕೇಳಿ ಬಂದ ಹಿನ್ನೆಲೆಯಲ್ಲಿ ತಕ್ಷಣವೇ ಪ್ರತಿಕ್ರಿಯಿಸಿರುವ ನಟ ನಿವಿನ್ ಪೌಲಿ ಈ ಆರೋಪ ನಿರಾಧಾರ, ನಾನು ನಿರಪರಾಧಿ ಎಂದು ಸಾಬೀತುಪಡಿಸಲು ಸಾಧ್ಯವಿರುವ ಎಲ್ಲಾ ಕಾನೂನು ಕ್ರಮಗಳನ್ನು ತೆಗೆದುಕೊಳ್ಳುವುದಾಗಿ ಪ್ರತಿಜ್ಞೆ ಮಾಡಿದ್ದಾರೆ. ಹೇಮಾ ಸಮಿತಿಯ ವರದಿಯ ಬಿಡುಗಡೆಯ ನಂತರ ಮಲಯಾಳಂ ಚಲನಚಿತ್ರೋದ್ಯಮವು ಹಲವಾರು ಲೈಂಗಿಕ ಕಿರುಕುಳದ ಪ್ರಕರಣ ಎದುರಿಸುತ್ತಿರುವ ನಡುವೆಯೇ ಈ ಆರೋಪಗಳು ಬಂದಿವೆ, ಇದು ಉದ್ಯಮದಲ್ಲಿ ವ್ಯಾಪಕವಾದ ಲೈಂಗಿಕ ದುರ್ನಡತೆ ಮತ್ತು ಮಹಿಳೆಯರ ಶೋಷಣೆಯನ್ನು ಬಹಿರಂಗಪಡಿಸಿದೆ.
ದುಬೈನಲ್ಲಿ ನಟ ಮತ್ತು ಸಹೋದ್ಯೋಗಿಗಳು ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ 40 ವರ್ಷದ ಮಹಿಳೆ ನೀಡಿದ ದೂರಿನ ಆಧಾರದ ಮೇಲೆ ಎರ್ನಾಕುಲಂನ ಓನ್ನುಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಿನಿಮಾದಲ್ಲಿ ಪಾತ್ರ ನೀಡುವ ನೆಪದಲ್ಲಿ ತನ್ನ ಮೇಲೆ ಅತ್ಯಾಚಾರ ಎಸಗಲಾಗಿದೆ ಎಂದು ಮಹಿಳೆ ಆರೋಪಿಸಿದ್ದಾರೆ. ಈ ಪ್ರಕರಣದಲ್ಲಿ ನಿವಿನ್ ಸೇರಿದಂತೆ ಅನೇಕ ವ್ಯಕ್ತಿಗಳು ಭಾಗಿಯಾಗಿದ್ದರು ಎಂದು ದೂರುದಾರರು ಆರೋಪಿಸಿದ್ದಾರೆ.
ವಿಶೇಷ ತನಿಖಾ ತಂಡವು (ಎಸ್‌ಐಟಿ) ದೂರುದಾರರಿಂದ ಹೇಳಿಕೆಗಳ ಸಂಗ್ರಹದ ನಂತರ ಜಿಲ್ಲಾ ಪೊಲೀಸ್ ಮುಖ್ಯಸ್ಥರಿಗೆ ದೂರನ್ನು ರವಾನಿಸಿದ ನಂತರ ಪ್ರಕರಣವನ್ನು ದಾಖಲಿಸಲಾಗಿದೆ.
ಪ್ರಕರಣದಲ್ಲಿ ಆರು ಆರೋಪಿಗಳಿದ್ದು, ನಿವಿನ್ ಪೌಲಿ ಅವರನ್ನು ಆರನೇ ಆರೋಪಿ ಎಂದು ಹೆಸರಿಸಲಾಗಿದೆ. ಈ ಸಂಬಂಧ ನಿವಿನ್ ಪೌಲಿ ಸಾಮಾಜಿಕ ಮಾಧ್ಯಮದಲ್ಲಿ ಪ್ರತಿಕ್ರಿಯಿಸಿದ್ದಾರೆ. ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿರುವ ಅವರು, ಇದು ಸಂಪೂರ್ಣವಾಗಿ ಸುಳ್ಳು ಮತ್ತು ಆಧಾರರಹಿತ ಎಂದಿದ್ದಾರೆ.
ನಾನು ಹುಡುಗಿಯ ಮೇಲೆ ದೌರ್ಜನ್ಯ ಎಸಗಿರುವ ಆರೋಪದ ಸುಳ್ಳು ಸುದ್ದಿಯನ್ನು ನೋಡಿದೆ. ದಯವಿಟ್ಟು ಇದು ಸಂಪೂರ್ಣವಾಗಿ ಸುಳ್ಳು. ಈ ಆರೋಪಗಳನ್ನು ಆಧಾರರಹಿತವೆಂದು ಸಾಬೀತುಪಡಿಸಲು ನಾನು ಯಾವುದೇ ಹಂತಕ್ಕೆ ಹೋಗಲು ನಿರ್ಧರಿಸಿದ್ದೇನೆ , ಮತ್ತು ಇದಕ್ಕೆ ಕಾರಣರಾದವರ ವಿರುದ್ಧ ಎಲ್ಲಾ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತೇನೆ. ನಿಮ್ಮ ಕಾಳಜಿಗೆ ಧನ್ಯವಾದಗಳು, ಉಳಿದವುಗಳನ್ನು ಕಾನೂನುಬದ್ಧವಾಗಿ ನಿರ್ವಹಿಸಲಾಗುವುದು ಎಂದು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.