
ಗಡ್ಚಿರೋಲಿ: ದೇಶದಲ್ಲಿ ಬಡವರಿಗೆ ಮೂಲಭೂತ ಸೌಕರ್ಯಗಳು ಮರೀಚಿಕೆ ಎಂಬ ಮಾತು ಮತ್ತೊಮ್ಮೆ ನಿಜವಾಗಿದ್ದು, ಮಹಾರಾಷ್ಟ್ರದ ಗಡ್ಚಿರೋಲಿಯಲ್ಲಿ ದಂಪತಿಗಳು ಗುರುವಾರ ಸೂಕ್ತ ಚಿಕಿತ್ಸೆ ಸಿಗದೆ ಮೃತಪಟ್ಟ ತಮ್ಮ ಇಬ್ಬರು ಮಕ್ಕಳನ್ನು ಹೆಗಲ ಮೇಲೆ ಹೊತ್ತುಕೊಂಡು ಆಸ್ಪತ್ರೆಯಿಂದ 15 ಕಿಲೋಮೀಟರ್ ನಡೆದು ಮನೆ ತಲುಪಿದ ಘಟನೆ ನಡೆದಿದೆ.
ಆಹೇರಿ ತಾಲೂಕಿನ ಹಳ್ಳಿಯೊಂದರ ದಂಪತಿಗಳು, ತೀವ್ರ ಜ್ವರದಿಂದ ಮೃತಪಟ್ಟಿದ್ದ ತಮ್ಮ ಇಬ್ಬರು ಪುತ್ರರ ಮೃತದೇಹಗಳನ್ನು ಹೆಗಲ ಮೇಲೆ ಹೊತ್ತೊಯ್ದಿರುವ ವಿಡಿಯೊ ಇದೀಗ ವೈರಲ್ ಆಗಿದೆ.
ತೀವ್ರ ಜ್ವರದಿಂದ ಬಳಲುತ್ತಿದ್ದ ಬಾಲಕರು ಸಮಯಕ್ಕೆ ಸರಿಯಾಗಿ ಸೂಕ್ತ ಚಿಕಿತ್ಸೆ ದೊರೆಯದ ಕಾರಣ ಸಾವನ್ನಪ್ಪಿದ್ದಾರೆ. ಆಸ್ಪತ್ರೆ ಸಿಬ್ಬಂದಿ ಆಂಬ್ಯುಲೆನ್ಸ್ ನೀಡಲು ನಿರಾಕರಿಸಿದ್ದರಿಂದ ಆಸ್ಪತ್ರೆಯಿಂದ 15 ಕಿಮೀ ದೂರದಲ್ಲಿರುವ ಗಡ್ಚಿರೋಲಿಯಲ್ಲಿರುವ ತಮ್ಮ ಗ್ರಾಮದ ಮನೆಗೆ ಕಾಲ್ನಡಿಗೆಯಲ್ಲೆ ದಂಪತಿ ಸಾಗಿದ್ದಾರೆ.
ಈ ಘಟನೆಯ ವಿಡಿಯೋವನ್ನು ವಿಧಾನಸಭೆಯ ವಿರೋಧ ಪಕ್ಷದ ನಾಯಕ ವಿಜಯ್ ವಡೆಟ್ಟಿವಾರ್ ಅವರು ಎಕ್ಸ್ ನಲ್ಲಿ ಹಂಚಿಕೊಂಡಿದ್ದು, ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
"ಗಡ್ಚಿರೋಲಿ ಜಿಲ್ಲೆಯ ಆರೋಗ್ಯ ವ್ಯವಸ್ಥೆಯ ಕಠೋರ ವಾಸ್ತವ ಇಂದು ಮತ್ತೆ ಮುನ್ನೆಲೆಗೆ ಬಂದಿದೆ" ಎಂದು ಅವರು ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.
ವೀಡಿಯೋದಲ್ಲಿ ದಂಪತಿಗಳು ಕಣ್ಣೀರಿಟ್ಟು, ಕೆಸರುಮಯವಾದ ಕಾಡಿನ ಹಾದಿಯಲ್ಲಿ ಮಕ್ಕಳ ಮೃತದೇಹ ಹೊತ್ತು ಸಾಗುತ್ತಿದ್ದಾರೆ. ಇಬ್ಬರೂ ತಮ್ಮ ಒಬ್ಬೊಬ್ಬ ಮಗನನ್ನು ಹೆಗಲ ಮೇಲೆ ಹೊತ್ತುಕೊಂಡಿದ್ದಾರೆ.
“ಇಬ್ಬರು ಒಡಹುಟ್ಟಿದವರು ಜ್ವರದಿಂದ ಬಳಲುತ್ತಿದ್ದರು. ಆದರೆ, ಅವರಿಗೆ ಸಮಯಕ್ಕೆ ಚಿಕಿತ್ಸೆ ಸಿಗಲಿಲ್ಲ. ಒಂದೆರಡು ಗಂಟೆಗಳಲ್ಲಿ ಅವರ ಸ್ಥಿತಿ ಹದಗೆಟ್ಟಿತು ಮತ್ತು ಮುಂದಿನ ಒಂದು ಗಂಟೆಯಲ್ಲಿ ಇಬ್ಬರು ಹುಡುಗರು ಸಾವನ್ನಪ್ಪಿದರು” ಎಂದು ವಡೆಟ್ಟಿವಾರ್ ಅವರು ದುರಂತದ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ.
“ಇಬ್ಬರು ಅಪ್ರಾಪ್ತರ ಮೃತದೇಹಗಳನ್ನು ಅವರ ಗ್ರಾಮವಾದ ಪಟ್ಟಿಗಾಂವ್‌ಗೆ ವರ್ಗಾಯಿಸಲು ಸಹ ಆಂಬ್ಯುಲೆನ್ಸ್ ಇರಲಿಲ್ಲ ಮತ್ತು ಪೋಷಕರು ಮಳೆಯಿಂದ ತೋಯ್ದ ಕೆಸರು ಹಾದಿಯಲ್ಲಿ 15 ಕಿಲೋಮೀಟರ್ ನಡೆದುಕೊಂಡು ಹೋಗಬೇಕಾಯಿತು. ಗಡ್ಚಿರೋಲಿಯ ಆರೋಗ್ಯ ವ್ಯವಸ್ಥೆಯ ಕಠೋರ ವಾಸ್ತವ ಇಂದು ಮತ್ತೆ ಮುನ್ನೆಲೆಗೆ ಬಂದಿದೆ” ಎಂದು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
Advertisement