ಲಕ್ನೋ: ನರ್ಸರಿ ವಿಭಾಗದ ಬಾಲಕ ಮಾಂಸಾಹಾರಿ ಊಟವನ್ನು ಶಾಲೆಗೆ ಲಂಚ್ ಬಾಕ್ಸ್ ನಲ್ಲಿ ತೆಗೆದುಕೊಂಡು ಬಂದಿದ್ದಕ್ಕೆ ಖಾಸಗಿ ಶಾಲೆಯ ಪ್ರಾಂಶುಪಾಲರು ವಿದ್ಯಾರ್ಥಿಯನ್ನು ಅಮಾನತುಗೊಳಿಸಿದ ಘಟನೆ ಉತ್ತರ ಪ್ರದೇಶದ ಅಮ್ರೋಹಾದ ಹಿಲ್ಟನ್ ಪಬ್ಲಿಕ್ ಶಾಲೆಯಲ್ಲಿ ನಡೆದಿದೆ.
ಈ ಸಂಬಂಧ ಪ್ರಾಂಶುಪಾಲರ ಕೊಠಡಿಗೆ ಬಂದ ಬಾಲಕನ ತಾಯಿ ಪ್ರಾಂಶುಪಾಲರೊಂದಿಗೆ ವಾಗ್ವಾದಕ್ಕಿಳಿದಿರುವ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ವೈರಲ್ ಆಗಿದೆ. ಆಹಾರದ ವಿಚಾರದಲ್ಲಿ ತಾರತಮ್ಯ ಮಾಡಿದ ಪ್ರಾಂಶುಪಾಲರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯ ಕೇಳಿಬರುತ್ತಿದೆ.
ಈ ವಿಡಿಯೋವನ್ನು ಪೋಷಕರೊಬ್ಬರು ಚಿತ್ರೀಕರಿಸಿದ್ದಾರೆ ಎಂದು ವರದಿಯಾಗಿದೆ.
ಆ ಮಗು ಬೇರೆ ಮಕ್ಕಳಿಗೂ ಮಾಂಸಾಹಾರ ತಿನ್ನಿಸುತ್ತೇನೆ, ಸಹಪಾಠಿಗಳನ್ನು ಇಸ್ಲಾಂ ಧರ್ಮಕ್ಕೆ ಮತಾಂತರ ಮಾಡುತ್ತೇನೆ ಎಂದು ಹೇಳುತ್ತಾನೆ. ಇಂತಹ ಸಂಸ್ಕೃತಿ ಒಳ್ಳೆಯದಲ್ಲ, ಮಕ್ಕಳಿಗೆ ನೈತಿಕತೆಯ ಪಾಠ ಹೇಳಿಕೊಡಬೇಕು ಎಂದು ಪ್ರಾಂಶುಪಾಲರು ಹೇಳುತ್ತಿರುವುದನ್ನು ಕಾಣಬಹುದು.
ಆದರೆ, ಬಾಲಕನ ತಾಯಿ ಪ್ರಾಂಶುಪಾಲರ ಆರೋಪಗಳನ್ನು ತಳ್ಳಿಹಾಕಿದ್ದಾರೆ. ತನ್ನ ಏಳು ವರ್ಷದ ಮಗನಿಗೆ ಅಂತಹ ವಿಷಯ ಗ್ರಹಿಸಲು ಸಹ ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಅದಕ್ಕೆ ಪ್ರಾಂಶುಪಾಲರು ಇಂತಹ ವಿಚಾರಗಳನ್ನು ಮಗು ಮನೆಯಲ್ಲಿ ಕಲಿಯುತ್ತದೆ ಎಂದು ಹೇಳಿದ್ದಾರೆ.
ಇತರ ವಿದ್ಯಾರ್ಥಿಗಳ ಪೋಷಕರು ಆತಂಕ ವ್ಯಕ್ತಪಡಿಸಿದ್ದರಿಂದ ಶಾಲೆಯ ರಿಜಿಸ್ಟರ್‌ನಿಂದ ವಿದ್ಯಾರ್ಥಿಯ ಹೆಸರನ್ನು ತೆಗೆದುಹಾಕಲಾಗಿದೆ ಎಂದು ಪ್ರಾಂಶುಪಾಲರು ಹೇಳಿದ್ದಾರೆ. ಶಾಲೆಯಲ್ಲಿ ವಿದ್ಯಾರ್ಥಿಗಳು ಹಿಂದೂ-ಮುಸ್ಲಿಂ ವಿಷಯಗಳ ಬಗ್ಗೆ ಜಗಳವಾಡುತ್ತಾರೆ. ಅದೇ ತರಗತಿಯ ಇನ್ನೊಬ್ಬ ವಿದ್ಯಾರ್ಥಿಯು ತನ್ನ ಮಗುವಿನ ಮೇಲೆ ಆಗಾಗ್ಗೆ ಹಲ್ಲೆ ಮತ್ತು ತೊಂದರೆ ನೀಡುತ್ತಿದ್ದಾನೆ ಎಂದು ತಾಯಿ ಆರೋಪಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಅಮ್ರೋಹಾ ಪೊಲೀಸರು, ಶಾಲೆಗಳ ಜಿಲ್ಲಾ ಇನ್ಸ್‌ಪೆಕ್ಟರ್ (DIS) ಕ್ರಮ ಕೈಗೊಂಡಿದ್ದಾರೆ. ತನಿಖೆ ನಡೆಸಿ ಮುಂದಿನ ಕ್ರಮ ತೆಗೆದುಕೊಳ್ಳಲು ಮೂರು ಸದಸ್ಯರ ವಿಚಾರಣಾ ಸಮಿತಿಯನ್ನು ರಚಿಸಲಾಗಿದೆ ಎಂದು ಹೇಳಿದರು.
Advertisement