ದೆಹಲಿ: ಭಾರತದ ಖ್ಯಾತ ಅಥ್ಲೀಟ್ ಗಳಾದ ರೆಸ್ಲರ್ ಬಜರಂಗ್ ಪುನಿಯಾ, ವಿನೇಶ್ ಫೋಗಟ್ ಶುಕ್ರವಾರ ಕಾಂಗ್ರೆಸ್ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಯಾದರು.
ದೆಹಲಿಯಲ್ಲಿರುವ ಕಾಂಗ್ರೆಸ್ ಕಚೇರಿಯಲ್ಲಿ ಪಕ್ಷದ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್ ನೇತೃತ್ವದಲ್ಲಿ ಬಜರಂಗ್ ಪುನಿಯಾ ಮತ್ತು ವಿನೇಶ್ ಫೋಗಟ್ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು.
ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಪಕ್ಷದ ನಾಯಕ ಪವನ್ ಖೇರಾ, ಹರ್ಯಾಣ ಕಾಂಗ್ರೆಸ್ ಮುಖ್ಯಸ್ಥ ಉದಯ್ ಭಾನ್ ಮತ್ತು ಹರಿಯಾಣದ ಎಐಸಿಸಿ ಉಸ್ತುವಾರಿ ದೀಪಕ್ ಬಬಾರಿಯಾ ಉಪಸ್ಥಿತರಿದ್ದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ವಿನೇಶ್ ಫೋಗಟ್, 'ನಾನು ಕಾಂಗ್ರೆಸ್ ಪಕ್ಷಕ್ಕೆ ಧನ್ಯವಾದ ಹೇಳುತ್ತೇನೆ.
ಒಂದು ಮಾತಿದೆ ಕಷ್ಟದ ಸಮಯದಲ್ಲೇ ನಮ್ಮವರು ಯಾರು ಎಂದು ತಿಳಿಯುತ್ತದೆ. (ಕೆಹತೇ ಹೈ ನಾ ಕಿ ಬುರೇ ಟೈಮ್ ಮೇ ಪತಾ ಲಗ್ತಾ ಹೈ ಕಿ ಅಪ್ನಾ ಕೌನ್ ಹೈ) ನಮ್ಮನ್ನು ರಸ್ತೆಯಲ್ಲಿ ಎಳೆದುಕೊಂಡು ಹೋಗುವಾಗ ಬಿಜೆಪಿ ಹೊರತುಪಡಿಸಿ ಎಲ್ಲಾ ಪಕ್ಷಗಳು ನಮ್ಮೊಂದಿಗೆ ಇದ್ದವು. ಮಹಿಳೆಯರೊಂದಿಗೆ ನಿಲ್ಲುವ ಮತ್ತು ‘ಸಡಕ್‌ನಿಂದ ಸಂಸದ್’ಗೆ ಹೋರಾಡಲು ಸಿದ್ಧವಾಗಿರುವ ಪಕ್ಷಕ್ಕೆ ನಾನು ಸೇರಿದ್ದೇನೆ ಎಂದು ನನಗೆ ಹೆಮ್ಮೆ ಇದೆ ಎಂದು ಹೇಳಿದರು.
ರೈಲ್ವೇಸ್ ರಾಜಿನಾಮೆ ನೀಡಿದ್ದ ವಿನೇಶ್ ಫೋಗಟ್
ಕಾಂಗ್ರೆಸ್ ಪಕ್ಷ ಸೇರ್ಪಡೆಗೂ ಮುನ್ನ ವಿನೇಶ್ ಫೋಗಟ್ ಭಾರತೀಯ ರೈಲ್ವೇ ಇಲಾಖೆಯ ತಮ್ಮ ಹುದ್ದೆಗೂ ರಾಜಿನಾಮೆ ನೀಡಿದ್ದರು. 30 ವರ್ಷದ ಕುಸ್ತಿಪಟು ವಿನೇಶ್ ಫೋಗಟ್ ರ ಕ್ರೀಡಾ ಕ್ಷೇತ್ರದಲ್ಲಿನ ಸಾಧನೆಗಾಗಿ ಅವರಿಗೆ ಉತ್ತರ ರೈಲ್ವೆಯಲ್ಲಿ ವಿಶೇಷ ಕರ್ತವ್ಯದ ಅಧಿಕಾರಿಯಾಗಿ (OSD) ನೇಮಕ ಮಾಡಲಾಗಿತ್ತು.
Advertisement