
ಭೋಪಾಲ್: ನಾಗರಿಕ ಸಮಾಜವೇ ತಲೆ ತಗ್ಗಿಸುವಂತೆ ಘಟನೆ ವರದಿಯಾಗಿದ್ದು, ಮಹಿಳೆಗೆ ಮದ್ಯ ಕುಡಿಸಿ ಹಾಡಹಗಲೇ ಫುಟ್ಪಾತ್ ನಲ್ಲಿ ಅತ್ಯಾಚಾರ ಮಾಡಿರುವ ವಿಡಿಯೋವೊಂದು ವೈರಲ್ ಆಗುತ್ತಿದೆ.
ಮಧ್ಯಪ್ರದೇಶದ ಉಜ್ಜಯಿನಿಯಲ್ಲಿ ಈ ಘಟನೆ ವರದಿಯಾಗಿದ್ದು, ಇಲ್ಲಿನ ಕೊಯ್ಲಾ ಫಾಟಕ್ ಪ್ರದೇಶದಲ್ಲಿ ದುಷ್ಕರ್ಮಿಯೋರ್ವ ಮಹಿಳೆಗೆ ಮದ್ಯಪಾನ ಮಾಡಿಸಿ ಆಕೆಯನ್ನು ಫುಟ್ ಪಾತ್ ಮೇಲೆ ಹಗಲು ಹೊತ್ತಿನಲ್ಲೇ ಅತ್ಯಾಚಾರವೆಸಗಿದ್ದಾನೆ.
ದುಷ್ಕರ್ಮಿಯ ಕೃತ್ಯವನ್ನು ದಾರಿಹೋಕರೊಬ್ಬರು ತಮ್ಮ ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದು, ಮಾತ್ರವಲ್ಲದೇ ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿದ್ದಾರೆ. ಈ ವಿಡಿಯೋ ಇದೀಗ ವ್ಯಾಪಕ ವೈರಲ್ ಆಗಿದ್ದು, ದುಷ್ಕರ್ಮಿಯ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ.
ವಿಡಿಯೋ ವೈರಲ್ ಆಗುತ್ತಲೇ ಬಂಧನ
ಇನ್ನು ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಸುದ್ದಿಗೆ ಗ್ರಾಸವಾಗುತ್ತಲೇ ಎಚ್ಚೆತ್ತ ಉಜ್ಜಯಿನಿ ಪೊಲೀಸರು ತನಿಖೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ. ಈತ ಅದೇ ರಸ್ತೆಯಲ್ಲಿ ತಳ್ಳುಗಾಡಿಯಲ್ಲಿ ಹಣ್ಣು ಮಾರಾಟ ಮಾಡುತ್ತಿದ್ದ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಎಸ್ಪಿ ಪ್ರದೀಪ್ ಶರ್ಮಾ ತಂಡವನ್ನು ರಚಿಸಿ ಆರೋಪಿಯನ್ನು ಬಂಧಿಸಲು ಸೂಚನೆ ನೀಡಿದ್ದರು. ಅದರಂತೆ ತನಿಖೆ ನಡೆಸಿದ್ದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
'ಆರೋಪಿಯು ಮಹಿಳೆಯನ್ನು ಮದುವೆಯಾಗುವುದಾಗಿ ಭರವಸೆ ನೀಡಿ, ಆಕೆಗೆ ಮದ್ಯ ಕುಡಿಸಿ ನಂತರ ಆಕೆಯ ಮೇಲೆ ಅತ್ಯಾಚಾರವೆಸಗಿದ್ದಾನೆ. ಆಘಾತಕಾರಿ ಸಂಗತಿಯೆಂದರೆ, ಅಪರಾಧವನ್ನು ನಿಲ್ಲಿಸುವ ಬದಲು, ಹಾದುಹೋಗುತ್ತಿದ್ದ ಕೆಲವರು ಅಪರಾಧದ ವೀಡಿಯೊಗಳನ್ನು ಚಿತ್ರೀಕರಿಸಿದ್ದಾರೆ' ಎಂದು ಪೊಲೀಸರು ಹೇಳಿದ್ದಾರೆ.
ಚಿಂದಿ ಆಯುವ ಮಹಿಳೆ ಮೇಲೆ ಅತ್ಯಾಚಾರ
ಇನ್ನು ಸಂತ್ರಸ್ಥ ಮಹಿಳೆ ಝಬುವಾ ಚಿಂದಿ ಆಯುತ್ತಾ ಈ ಕೊಯ್ಲಾ ಫಾಟಕ್ ಪ್ರದೇಶಕ್ಕೆ ಆಗಮಿಸಿದ್ದು, ಈ ವೇಳೆ ಈಕೆಯನ್ನು ಕಂಡ ಆರೋಪಿ ಆಕೆಯನ್ನು ಮಾತಿಗೆಳೆದು ಬಳಿಕ ಆಕೆಗೆ ಬಲವಂತವಾಗಿ ಮದ್ಯ ಕುಡಿಸಿದ್ದಾನೆ. ಈ ವೇಳೆ ಮಹಿಳೆ ಅರೆ ಪ್ರಜ್ಞಾಹೀನಳಾಗಿದ್ದು, ಇದೇ ಸಂದರ್ಭದಲ್ಲಿ ಫುಟ್ಪಾತ್ ನಲ್ಲಿಯೇ ದುಷ್ಕರ್ಮಿ ಆಕೆ ಮೇಲೆ ಅತ್ಯಾಚಾರ ವೆಸಗಿದ್ದಾನೆ.
ಅಲ್ಲದೆ ಈ ವಿಚಾರವನ್ನು ಯಾರಿಗಾದರೂ ಹೇಳಿದರೆ ಕೊಲೆ ಮಾಡುವುದಾಗಿ ಆಕೆಯನ್ನು ಬೆದರಿಸಿದ್ದಾರೆ. ಅದೇ ದಾರಿಯಲ್ಲಿ ಸಾಗುತ್ತಿದ್ದ ದಾರಿಹೋಕರೊಬ್ಬರು ಈ ಘಟನೆಯನ್ನು ತಮ್ಮ ಮೊಬೈಲ್ ನಲ್ಲಿ ರೆಕಾರ್ಡ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.
ಸರ್ಕಾರದ ವಿರುದ್ಧ ವಿಪಕ್ಷಗಳ ಕಿಡಿ
ಇನ್ನು ಈ ಘಟನೆಯನ್ನು ಗಂಭೀರವಾಗಿ ಖಂಡಿಸಿರುವ ವಿಪಕ್ಷಗಳು ರಾಜ್ಯದಲ್ಲಿನ ಕಾನೂನು ಸುವ್ಯವಸ್ಥೆ ಕುರಿತು ಕಳವಳ ವ್ಯಕ್ತಪಡಿಸಿವೆ. ಕಾಂಗ್ರೆಸ್ ರಾಜ್ಯಾಧ್ಯಕ್ಷ ಜಿತು ಪಟ್ವಾರಿ ಈ ಕುರಿತು ಎಕ್ಸ್ ನಲ್ಲಿ ಟ್ವೀಟ್ ಮಾಡಿದ್ದು, 'ಧಾರ್ಮಿಕ ನಗರಿ ಉಜ್ಜಯಿನಿ ಮತ್ತೆ ಕಳಂಕಿತವಾಗಿದೆ. ಮುಖ್ಯಮಂತ್ರಿಗಳ ತವರೂರಿನ ಸ್ಥಿತಿ ಹೀಗಾದರೆ ರಾಜ್ಯದ ಉಳಿದ ಭಾಗದ ಸ್ಥಿತಿ ಹೇಗಿರುತ್ತದೆ ಎಂಬುದು ಸುಲಭವಾಗಿ ಅರ್ಥವಾಗುತ್ತದೆ' ಎಂದು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
Advertisement