
ನವದೆಹಲಿ: ಸೆಬಿ ಮುಖ್ಯಸ್ಥರಾದ ಮಾಧಬಿ ಪುರಿ ಬುಚ್ ವಿರುದ್ಧದ ಹಿತಾಸಕ್ತಿ ಸಂಘರ್ಘದ ಆರೋಪ ವಿಚಾರದಲ್ಲಿ ಎದ್ದಿರುವ ರಾಜಕೀಯ ಬಿರುಗಾಳಿ ನಡುವೆಯೇ ಸಂಸತ್ತಿನ ಕಾಯ್ದೆಯಿಂದ ಸ್ಥಾಪನೆಯಾದ ಸೆಬಿಯ ಕಾರ್ಯಕ್ಷಮತೆ ಪರಾಮರ್ಶೆ ನಡೆಸಲು ಸಂಸತ್ತಿನ ಸಾರ್ವಜನಿಕ ಲೆಕ್ಕ ಸಮಿತಿ ನಿರ್ಧರಿಸಿದೆ.
ಮಾಧಬಿ ಪುರಿ ಬುಚ್ ವಿರುದ್ಧದ ಆರೋಪ ಪರಿಶೀಲನೆಗೆ ಬುಚ್ ಗೆ ಸಮನ್ಸ್ ನೀಡುವ ಕುರಿತು ಸಮಿತಿ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ಸಾರ್ವಜನಿಕ ಲೆಕ್ಕ ಸಮಿತಿ ಅಧ್ಯಕ್ಷ ಕೆ.ಸಿ. ವೇಣುಗೋಪಾಲ್ ಹೇಳಿದ್ದಾರೆ.
ಸೆಬಿ ಮುಖ್ಯಸ್ಥರಿಗೆ ಸಮನ್ಸ್ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ವೇಣುಗೋಪಾಲ್, ಉಳಿದ ವಿಚಾರಗಳಿಗೆ ಸಮಿತಿ ತೀರ್ಮಾನ ತೆಗೆದುಕೊಳ್ಳಲಿದೆ. ಸಂಸತ್ತಿನ ಕಾಯ್ದೆ ಮೂಲಕ ಸ್ಥಾಪನೆಯಾಗಿರುವ SEBI ಕಾರ್ಯಕ್ಷಮತೆ ಪರಿಶೀಲನೆ ಸೇರಿದಂತೆ ವಿವಿಧ ವಿಚಾರಗಳ ಬಗ್ಗೆ ಸದಸ್ಯರು ಸಲಹೆ ನೀಡಿದ್ದಾರೆ. ಸದಸ್ಯರು ಈ ಸಲಹೆಗಳನ್ನು ಅಜೆಂಡಾದಲ್ಲಿ ಸೇರಿಸಿದ್ದೇವೆ ಎಂದರು.
ಹಿಂದಿನ ವರ್ಷದಿಂದ ಸಮಿತಿಯ ಮುಂದೆ ಬಾಕಿ ಉಳಿದಿರುವ ವಿಷಯಗಳ ಜೊತೆಗೆ PAC ತನ್ನ ಅಧಿಕಾರಾವಧಿಯಲ್ಲಿ ಪರೀಕ್ಷೆಗೆ 161 ವಿಷಯಗಳನ್ನು ಆಯ್ಕೆ ಮಾಡಿದೆ. ಅದಾನಿ ಗ್ರೂಪ್ ವಿರುದ್ಧದ ಹಿಡನ್ ಬರ್ಗ್ ಸಂಶೋಧನಾ ಹೇಳಿಕೆಯ ತನಿಖೆಯಲ್ಲಿ ಸೆಬಿ ವಿಚಾರದಲ್ಲಿ ಬುಚ್ ಹಿಸಾತಕ್ತಿ ಸಂಘರ್ಷ ಆರೋಪ ಎದುರಿಸುತ್ತಿದ್ದಾರೆ.
ಬುಚ್ ಸೆಬಿಯ ಪೂರ್ಣಾವಧಿ ಸದಸ್ಯರಾದ ನಂತರ ಅವರ ಮಾಜಿ ಉದ್ಯೋಗದಾತರಾದ ಐಸಿಐಸಿಐ ಬ್ಯಾಂಕ್ ಮಾಡಿದ ಪಾವತಿಗಳನ್ನು ಕಾಂಗ್ರೆಸ್ ಪ್ರಶ್ನಿಸಿದೆ ಮತ್ತು ಈ ವಿಷಯದ ಬಗ್ಗೆ ಸ್ವತಂತ್ರ ತನಿಖೆಯನ್ನು ಕೋರಿದೆ.
ಪಿಎಸಿ ತನ್ನ ಮುಂದಿನ ಸಭೆಯನ್ನು ಸೆಪ್ಟೆಂಬರ್ 10 ರಂದು ನಡೆಸಲಿದೆ. PAC ವಿಮಾನ ನಿಲ್ದಾಣಗಳಂತಹ ಸಾರ್ವಜನಿಕ ಮೂಲಸೌಕರ್ಯಗಳಲ್ಲಿ ವಿಧಿಸಲಾದ "ಶುಲ್ಕಗಳು, ಸುಂಕಗಳು, ಬಳಕೆದಾರ ಶುಲ್ಕ ಮುಂತಾದವುಗಳನ್ನು ಸಹ ಆಡಿಟ್ ಮಾಡಲಿದೆ. ಪ್ರಸ್ತುತ ಏಳು ಭಾರತೀಯ ವಿಮಾನ ನಿಲ್ದಾಣಗಳನ್ನು ಅದಾನಿ ಗ್ರೂಪ್ ನಿರ್ವಹಿಸುತ್ತಿದೆ. PAC ಸರ್ಕಾರದ ಆದಾಯ ಮತ್ತು ವೆಚ್ಚಗಳ ಲೆಕ್ಕಪರಿಶೋಧನೆಯ ಜವಾಬ್ದಾರಿಯನ್ನು ಹೊಂದಿದೆ.
Advertisement