ನವದೆಹಲಿ: ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧ ಮುಂದುವರೆದಿರುವಂತೆಯೇ ಇತ್ತ ಉಭಯ ದೇಶಗಳ ನಡುವಿನ ಶಾಂತಿ ಮಾತುಕತೆ ಕುರಿತ ಸಂಧಾನಕ್ಕಾಗಿ ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಧೋವಲ್ ರಷ್ಯಾಗೆ ದೌಡಾಯಿಸಿದ್ದಾರೆ.
ಮೂಲಗಳ ಪ್ರಕಾರ ರಾಷ್ಟ್ರೀಯ ಭದ್ರತಾ ಸಲಹೆಗಾರ (ಎನ್‌ಎಸ್‌ಎ) ಅಜಿತ್ ದೋವಲ್ ಈ ವಾರ ರಷ್ಯಾ-ಉಕ್ರೇನ್ ಯುದ್ಧಕ್ಕೆ ಶಾಂತಿಯುತ ಪರಿಹಾರವನ್ನು ಸಾಧಿಸುವ ಕುರಿತು ಮಾತುಕತೆಗಾಗಿ ರಷ್ಯಾಕ್ಕೆ ಭೇಟಿ ನೀಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಕಳೆದ ಎರಡು ತಿಂಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ರಷ್ಯಾ ಮತ್ತು ಉಕ್ರೇನ್‌ಗೆ ಭೇಟಿ ನೀಡಿದ ಬೆನ್ನಲ್ಲೇ ಈ ಬೆಳವಣಿಗೆಗಳು ಆರಂಭವಾಗಿವೆ.
ಶಾಂತಿ ಪ್ರಯತ್ನಗಳಲ್ಲಿ ಭಾರತದ ಪ್ರಧಾನಿ ಮೋದಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದು, ಈ ಜುಲೈನಲ್ಲಿ ರಷ್ಯಾಕ್ಕೆ ಭೇಟಿ ನೀಡಿದ್ದ ಮೋದಿ ಅವರು ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರಿಗೆ "ಇದು ಯುದ್ಧದ ಯುಗವಲ್ಲ" ಎಂದು ಪುನರುಚ್ಚರಿಸಿದ್ದರು.
ಒಂದು ತಿಂಗಳ ನಂತರ, ಮೋದಿ ಅವರು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರನ್ನು ಕೀವ್‌ನಲ್ಲಿ ಭೇಟಿಯಾಗಿದ್ದರು. ಈ ವೇಳೆ ಶಾಂತಿಗಾಗಿ ಭಾರತದ ಬದ್ಧತೆಯನ್ನು ಪುನರುಚ್ಚರಿಸಿದ್ದರು.
ಗುರುವಾರ, ರಷ್ಯಾದ ನಗರವಾದ ವ್ಲಾಡಿವೋಸ್ಟಾಕ್‌ನಲ್ಲಿ ಈಸ್ಟರ್ನ್ ಎಕನಾಮಿಕ್ ಫೋರಂನಲ್ಲಿ ಪ್ಯಾನೆಲ್ ಚರ್ಚೆಯಲ್ಲಿ ಮಾತನಾಡಿದ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್, ಉಕ್ರೇನ್ ಸಂಘರ್ಷದ ಕುರಿತು ಭಾರತ, ಬ್ರೆಜಿಲ್ ಮತ್ತು ಚೀನಾದೊಂದಿಗೆ ಸಂಪರ್ಕದಲ್ಲಿರುವುದಾಗಿ ಹೇಳಿದ್ದರು.
Advertisement