ಅಂಬಿಕಾಪುರ: ಛತ್ತೀಸ್‌ಗಢದ ಸುರ್ಗುಜಾ ಜಿಲ್ಲೆಯ ಅಲ್ಯುಮಿನಾ ರಿಫೈನರಿಯಲ್ಲಿ (ಸಂಸ್ಕರಣಾ ಘಟಕ) ಭಾನುವಾರ ಕಲ್ಲಿದ್ದಲು ತುಂಬಿದ 'ಹಾಪರ್' ಕುಸಿದು ನಾಲ್ವರು ಕಾರ್ಮಿಕರು ಸಾವನ್ನಪ್ಪಿದ್ದಾರೆ ಮತ್ತು ಒಬ್ಬರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ರಘುನಾಥಪುರ ಪೊಲೀಸ್ ಚೌಕಿ ವ್ಯಾಪ್ತಿಯ ಸಿಲ್ಸಿಲಾ ಗ್ರಾಮದ ಮಾ ಕುದರ್‌ಗರ್ಹಿ ಅಲ್ಯುಮಿನಾ ರಿಫೈನರಿಯಲ್ಲಿ ಬೆಳಗ್ಗೆ 11 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕಲ್ಲಿದ್ದಲು ತುಂಬಿದ 'ಹಾಪರ್' ಕುಸಿದು ಅದರ ಕೆಳಗೆ ಕೆಲಸ ಮಾಡುತ್ತಿದ್ದ ಹತ್ತು ಜನರ ಮೇಲೆ ಬಿದ್ದಿದೆ. ಪೊಲೀಸ್ ತಂಡ ಸ್ಥಳಕ್ಕೆ ಧಾವಿಸಿದ್ದು ರಕ್ಷಣಾ ಕಾರ್ಯಾಚರಣೆ ನಡೆಸಿದೆ ಎಂದು ಅವರು ಹೇಳಿದರು.
ನಾಲ್ವರು ಕಾರ್ಮಿಕರ ಮೃತದೇಹಗಳನ್ನು ಸ್ಥಳದಿಂದ ಹೊರತೆಗೆಯಲಾಗಿದ್ದು, ಓರ್ವ ಕಾರ್ಮಿಕ ಚಿಂತಾಜನಕ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಇತರ ಐವರು ಕಾರ್ಮಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಅವರು ಹೇಳಿದರು.
ಮೃತರನ್ನು ಮಧ್ಯಪ್ರದೇಶದ ನಿವಾಸಿಗಳು ಎಂದು ಗುರುತಿಸಲಾಗಿದೆ. ಘಟನೆಯ ಕುರಿತು ತನಿಖೆ ನಡೆಯುತ್ತಿದೆ ಎಂದು ಅವರು ತಿಳಿಸಿದ್ದಾರೆ.
Advertisement