ಕೋಟಾ(ರಾಜಸ್ಥಾನ): ಶಾಲಾ ವಾಟ್ಸಾಪ್ ಗ್ರೂಪ್‌ನಲ್ಲಿ ಪೋಸ್ಟ್ ಮಾಡಲಾದ ಗಣೇಶ ಚತುರ್ಥಿ ಶುಭಾಶಯಗಳನ್ನು ಡಿಲೀಟ್ ಮಾಡಿದ ಆರೋಪದ ಮೇಲೆ ಸರ್ಕಾರಿ ಶಾಲೆಯ ಪ್ರಾಂಶುಪಾಲರನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಲಾತೂರಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಪ್ರಾಂಶುಪಾಲ ಶಫಿ ಮೊಹಮ್ಮದ್ ಅನ್ಸಾರಿ ಅವರನ್ನು ವಜಾಗೊಳಿಸುವಂತೆ ಒತ್ತಾಯಿಸಿ ನಿವಾಸಿಗಳು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಹೊರಗೆ ಜಮಾಯಿಸಿ, ಒತ್ತಾಯಿಸಿದರು.
ಅಧಿಕಾರಿಗಳ ಪ್ರಕಾರ, ಪೋಷಕರು ಮತ್ತು ಶಿಕ್ಷಕರನ್ನು ಒಳಗೊಂಡ ಶಾಲೆಯ ವಾಟ್ಸಾಪ್ ಗ್ರೂಪ್ ನಲ್ಲಿ ಭಗವಾನ್ ಗಣೇಶನ ಚಿತ್ರವನ್ನು ಒಳಗೊಂಡ ಪೋಸ್ಟ್‌ಗಳನ್ನು ಅನ್ಸಾರಿ ಡಿಲೀಟ್ ಮಾಡಿದ್ದಾರೆ.
ಡೆಪ್ಯುಟಿ ಸೂಪರಿಂಟೆಂಡೆಂಟ್ ಆಫ್ ಪೋಲೀಸ್(ಡಿಎಸ್ಪಿ) ನರೇಂದ್ರ ನಾಡಾರ್ ಅವರು ಶಾಲಾ ಆಡಳಿತ ಅಭಿವೃದ್ಧಿ ಸಮಿತಿ (SMDC) ಎಂಬ ಹೆಸರಿನ ಗುಂಪಿನಲ್ಲಿ ಗಣೇಶ ಚತುರ್ಥಿ ಶುಭಾಶಯವನ್ನು ಗ್ರಾಮಸ್ಥರು ಹಂಚಿಕೊಂಡಾಗ ಈ ವಿವಾದ ಹುಟ್ಟಿಕೊಂಡಿದೆ ಎಂದು ಹೇಳಿದ್ದಾರೆ.
ಅನ್ಸಾರಿ ಅವರು ಮೊದಲು ಒಂದು ಪೋಸ್ಟ್ ಅನ್ನು ಡಿಲೀಟ್ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಎರಡು ಗಂಟೆಗಳ ನಂತರ, ಶಾಲೆಯ ಶಿಕ್ಷಕರೊಬ್ಬರು ಇದೇ ರೀತಿಯ ಶುಭಾಶಯವನ್ನು ಪೋಸ್ಟ್ ಮಾಡಿದ್ದಾರೆ. ಅದನ್ನು ಪ್ರಾಂಶುಪಾಲರು ಡಿಲೀಟ್ ಮಾಡಿದ್ದಾರೆ.
ಪ್ರಾಂಶುಪಾಲರ ಈ ಕ್ರಮ ಕೋಮು ಸೌಹಾರ್ದತೆಯನ್ನು ಕದಡುವ ಯತ್ನವಾಗಿದ್ದು, ಅವರನ್ನು ಕೆಲಸದಿಂದ ತೆಗೆದುಹಾಕಬೇಕೆಂದು ಒತ್ತಾಯಿಸಿ ಶಾಲೆಯ ಹೊರಗೆ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.
ಸ್ಟೇಷನ್ ಹೌಸ್ ಆಫೀಸರ್(ಎಸ್‌ಎಚ್‌ಒ) ಉತ್ತಮ್ ಸಿಂಗ್ ಸೇರಿದಂತೆ ಬಾಪವಾರ್ ಪೊಲೀಸ್ ಠಾಣೆಯ ಅಧಿಕಾರಿಗಳು ಪರಿಸ್ಥಿತಿಯನ್ನು ನಿಯಂತ್ರಿಸಲು ಘಟನಾ ಸ್ಥಳಕ್ಕೆ ಆಗಮಿಸಿದರು ಮತ್ತು
ಕೋಮು ಸೌಹಾರ್ದತೆಗೆ ಭಂಗ ತಂದ ಆರೋಪದ ಮೇಲೆ ಅನ್ಸಾರಿ ಅವರನ್ನು ಭಾರತೀಯ ನಾಗರಿಕ ಸುರಕ್ಷಾ ಸಂಹಿತಾ(BNSS) ಸೆಕ್ಷನ್ 127 ರ ಅಡಿಯಲ್ಲಿ ಬಂಧಿಸಲಾಯಿತು. ಆದರೆ, ಜಾಮೀನು ಮಂಜೂರಾಗಿದ್ದು, ಸಂಜೆಯ ವೇಳೆಗೆ ಬಿಡುಗಡೆಯಾಗಿದ್ದಾರೆ. ಗ್ರಾಮದಲ್ಲಿ ಪರಿಸ್ಥಿತಿ ಶಾಂತಿಯುತವಾಗಿದೆ ಎಂದು ಎಸ್‌ಎಚ್‌ಒ ಉತ್ತಮ್ ಸಿಂಗ್ ತಿಳಿಸಿದ್ದಾರೆ.
Advertisement