Gujarat: ಸೂರತ್ ನಲ್ಲಿ ಗಣೇಶ ಪೆಂಡಾಲ್ ಮೇಲೆ ಕಲ್ಲು ತೂರಾಟ: 27 ಮಂದಿ ಬಂಧನ, ಪೊಲೀಸರಿಂದ ಲಾಠಿ ಚಾರ್ಜ್

ಶಾಂತಿ ಭಂಗಕ್ಕೆ ಕಾರಣರಾದ ಎಲ್ಲಾ ಆರೋಪಿಗಳನ್ನು ಬಂಧಿಸಲಾಗುತ್ತಿದೆ. ಸುತ್ತಲೂ ಸುಮಾರು 1,000 ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ಸೂರತ್ ಪೊಲೀಸ್ ಕಮಿಷನರ್ ಅನುಪಮ್ ಸಿಂಗ್ ಗೆಹ್ಲೋಟ್ ಹೇಳಿದ್ದಾರೆ.
ಕಲ್ಲು ತೂರಾಟ ನಡೆದ ಸ್ಥಳ
ಕಲ್ಲು ತೂರಾಟ ನಡೆದ ಸ್ಥಳ
Updated on

ಸೂರತ್ (ಗುಜರಾತ್): ಗುಜರಾತಿನ ಸೂರತ್‌ನಲ್ಲಿ ಗಣೇಶ್ ಪೆಂಡಾಲ್ ಮೇಲೆ ನಿನ್ನೆ ಭಾನುವಾರ ಸಾಯಂಕಾಲ ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿದ ನಂತರ ಸ್ಥಳದಲ್ಲಿ ಪರಿಸ್ಥಿತಿ ಉದ್ವಿಗ್ನಗೊಂಡಿದೆ.

ಸೂರತ್‌ನ ಸಯದ್‌ಪುರ ಪ್ರದೇಶದಲ್ಲಿ ಗಣೇಶ್ ಪೆಂಡಾಲ್ ಕೂರಿಸಿದ್ದರ ಮೇಲೆ ಕೆಲವರು ಕಲ್ಲು ತೂರಾಟ ನಡೆಸಿದ್ದರು. ಕಲ್ಲು ತೂರಾಟದಲ್ಲಿ ತೊಡಗಿದ್ದ ಎಲ್ಲಾ 6 ಜನರನ್ನು ಮತ್ತು ಘಟನೆಗೆ ಪ್ರೇರಣೆ ನೀಡಿದ 27 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಗುಜರಾತ್ ಗೃಹ ಸಚಿವ ಹರ್ಷ್ ಸಾಂಘ್ವಿ ಹೇಳಿದ್ದಾರೆ.

ಕಲ್ಲು ತೂರಾಟದ ನಂತರ ಪ್ರದೇಶದಲ್ಲಿ ಉದ್ವಿಗ್ನತೆ ಉಂಟಾದ ನಂತರ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಸುಮಾರು ಸಾವಿರ ಪೊಲೀಸ್ ಸಿಬ್ಬಂದಿಯನ್ನು ಪ್ರದೇಶದಲ್ಲಿ ನಿಯೋಜಿಸಲಾಗಿದೆ.

ಆಗಿದ್ದೇನು?: ಗಣೇಶ ಚತುರ್ಥಿ ಹಬ್ಬದ ಹಿನ್ನೆಲೆಯಲ್ಲಿ ಕೂರಿಸಲಾಗಿದ್ದ ಗಣೇಶ ಪೆಂಡಾಲ್ ಬಳಿ ಕೆಲವು ಮಕ್ಕಳು ಕಲ್ಲು ತೂರಾಟ ನಡೆಸಿದ ನಂತರ ಘರ್ಷಣೆ ನಡೆಯಿತು. ಪೊಲೀಸರು ತಕ್ಷಣ ಆ ಮಕ್ಕಳನ್ನು ಅಲ್ಲಿಂದ ಕರೆದೊಯ್ದು ನಂತರ ಸ್ಥಳದಲ್ಲಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಯಿತು. ಅಗತ್ಯವಿರುವ ಕಡೆಗಳಲ್ಲಿ ಲಾಠಿ ಚಾರ್ಜ್ ಹಾಗೂ ಆಶ್ರುವಾಯು ಪ್ರಯೋಗಿಸಲಾಯಿತು. ಶಾಂತಿ ಭಂಗಕ್ಕೆ ಕಾರಣರಾದ ಎಲ್ಲಾ ಆರೋಪಿಗಳನ್ನು ಬಂಧಿಸಲಾಗುತ್ತಿದೆ. ಸುತ್ತಲೂ ಸುಮಾರು 1,000 ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ಸೂರತ್ ಪೊಲೀಸ್ ಕಮಿಷನರ್ ಅನುಪಮ್ ಸಿಂಗ್ ಗೆಹ್ಲೋಟ್ ಹೇಳಿದ್ದಾರೆ.

ಘಟನೆ ನಡೆದ ಸ್ಥಳಕ್ಕೆ ಗುಜರಾತ್ ಗೃಹ ಸಚಿವ ಹರ್ಷ ಸಾಂಘ್ವಿ ಭೇಟಿ ನೀಡಿದ್ದು, ದುಷ್ಕರ್ಮಿಗಳ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ. ಸೂರತ್‌ನ ಸಯದ್‌ಪುರ ಪ್ರದೇಶದಲ್ಲಿ 6 ಮಂದಿ ಕಲ್ಲು ತೂರಾಟ ನಡೆಸಿದ್ದು, ಈ ಎಲ್ಲಾ 6 ಜನರನ್ನು ಬಂಧಿಸಲಾಗಿದೆ. ಘಟನೆಗೆ ಪ್ರೋತ್ಸಾಹ ನೀಡಿದ ಇತರ 27 ಜನರನ್ನು ಪೊಲೀಸರು ಬಂಧಿಸಿ ತನಿಖೆ ನಡೆಯುತ್ತಿದೆ. ಸ್ಥಳದಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ ಎಂದಿದ್ದಾರೆ.

ಮಧ್ಯಪ್ರದೇಶದಲ್ಲಿ ಕಲ್ಲು ತೂರಾಟ: ಕಳೆದ ಶನಿವಾರ ಮಧ್ಯಪ್ರದೇಶದ ರತ್ಲಾಮ್‌ನಲ್ಲಿ ಗಣೇಶ ಮೆರವಣಿಗೆಯ ಸಂದರ್ಭದಲ್ಲಿ ಇದೇ ರೀತಿಯ ಕಲ್ಲು ತೂರಾಟದ ಘಟನೆ ಸಂಭವಿಸಿದೆ. ಮೋಚಿಪುರ ಪ್ರದೇಶದಲ್ಲಿ ಭಕ್ತರು ಗಣೇಶನ ಮೂರ್ತಿಯನ್ನು ಕೊಂಡೊಯ್ಯುತ್ತಿದ್ದಾಗ ಈ ದಾಳಿ ನಡೆದಿದೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com