ಇಂಫಾಲ್: ಮಣಿಪುರದಲ್ಲಿ ಮತ್ತೆ ಹಿಂಸಾಚಾರ ಭುಗಿಲೆದ್ದಿದ್ದು, ರಾಜ್ಯ ಸರ್ಕಾರದ ಭದ್ರತಾ ಸಲಹೆಗಾರ ಮತ್ತು ಡಿಜಿಪಿಯನ್ನು ವಜಾಗೊಳಿಸುವಂತೆ ಒತ್ತಾಯಿಸಿ ಇಂಫಾಲ್‌ನ ರಾಜಭವನದತ್ತ ಮಂಗಳವಾರ ಪ್ರತಿಭಟನಾ ಮೆರವಣಿಗೆ ನಡೆಸಲು ಯತ್ನಿಸಿದ ವಿದ್ಯಾರ್ಥಿಗಳು ಹಾಗೂ ಮಹಿಳೆಯರ ಮೇಲೆ ಅಶ್ರುವಾಯು ಪ್ರಯೋಗಿಸಲಾಗಿದೆ.
ಈ ವೇಳೆ ಭದ್ರತಾ ಪಡೆಗಳೊಂದಿಗೆ ನಡೆದ ಘರ್ಷಣೆಯಲ್ಲಿ 40ಕ್ಕೂ ಹೆಚ್ಚು ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಾವಿರಾರು ವಿದ್ಯಾರ್ಥಿಗಳು ಮತ್ತು ಮಹಿಳಾ ಪ್ರತಿಭಟನಾಕಾರರು ಬಿಟಿ ರಸ್ತೆಯಲ್ಲಿರುವ ರಾಜಭವನದ ಕಡೆಗೆ ಪ್ರತಿಭಟನಾ ಮೆರವಣಿಗೆ ನಡೆಸಲು ಪ್ರಯತ್ನಿಸಿದರು. ಆದರೆ ಭದ್ರತಾ ಪಡೆಗಳು ಕಾಂಗ್ರೆಸ್ ಭವನದ ಬಳಿ ಅವರನ್ನು ತಡೆದರು ಎಂದು ಪೊಲೀಸರನ್ನು ಅವರು ಹೇಳಿದ್ದಾರೆ.
ಪ್ರತಿಭಟನಾಕಾರರು ಘೋಷಣೆಗಳನ್ನು ಕೂಗಿ, ಭದ್ರತಾ ಸಿಬ್ಬಂದಿಯ ಮೇಲೆ ಕಲ್ಲುಗಳನ್ನು ತೂರಿದರು. ಹೀಗಾಗಿ ಪ್ರತಿಭಟನಾಕಾರರನ್ನು ಚದುರಿಸಲು ಅಶ್ರುವಾಯು ಶೆಲ್‌ಗಳನ್ನು ಸಿಡಿಸಲಾಯಿತು.
ಪೊಲೀಸರೊಂದಿಗೆ ನಡೆದ ಘರ್ಷಣೆಯಲ್ಲಿ 40ಕ್ಕೂ ಹೆಚ್ಚು ವಿದ್ಯಾರ್ಥಿಗಳು ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇದಕ್ಕೂ ಮುನ್ನ ಮಣಿಪುರ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಪ್ರತಿಭಟನಾ ಮೆರವಣಿಗೆ ನಡೆಸಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಪ್ರತಿಕೃತಿ ದಹಿಸಿದರು.
ವಿದ್ಯಾರ್ಥಿಗಳ ಪ್ರತಿಭಟನೆಯನ್ನು ಗಮನದಲ್ಲಿಟ್ಟುಕೊಂಡು ಮಣಿಪುರ ಸರ್ಕಾರ ಇಂಫಾಲ್ ಪೂರ್ವ ಮತ್ತು ಪಶ್ಚಿಮ ಜಿಲ್ಲೆಗಳಲ್ಲಿ ಕರ್ಫ್ಯೂ ಮತ್ತು ಥೌಬಲ್‌ನಲ್ಲಿ BNSS ನ ಸೆಕ್ಷನ್ 163 (2) ರ ಅಡಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿದೆ.
ವಿದ್ಯಾರ್ಥಿಗಳ ತೀವ್ರ ಪ್ರತಿಭಟನೆ ನಡುವೆ ರಾಜ್ಯ ಸರ್ಕಾರವು ಇಡೀ ರಾಜ್ಯದಲ್ಲಿ ಐದು ದಿನಗಳ ಕಾಲ ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಿದೆ. ದ್ವೇಷ ಭಾಷಣ ಮತ್ತು ದ್ವೇಷದ ವೀಡಿಯೊಗಳನ್ನು ಪ್ರಸಾರ ಮಾಡಲು ಸಾಮಾಜಿಕ ಮಾಧ್ಯಮಗಳ ಬಳಕೆಯನ್ನು ತಡೆಯಲು ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ರಾಜ್ಯ ಗೃಹ ಇಲಾಖೆ ತಿಳಿಸಿದೆ.
Advertisement