ಚಂಡೀಗಢ: ಹರಿಯಾಣ ವಿಧಾನಸಭೆ ಚುನಾವಣಾ ರಂಗೇರುತ್ತಿದ್ದು, ಕುಸ್ತಿಪಟು-ರಾಜಕಾರಣಿ ವಿನೇಶ್ ಫೋಗಟ್ ಅವರು ಬುಧವಾರ ಜಿಂದ್ ಜಿಲ್ಲೆಯ ಜೂಲಾನಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದರು.
ಕಾಂಗ್ರೆಸ್ ನಾಯಕ ಮತ್ತು ರೋಹ್ಟಕ್ ಸಂಸದ ದೀಪೇಂದರ್ ಸಿಂಗ್ ಹೂಡಾ ಮತ್ತು ಸೋನಿಪತ್ ಸಂಸದ ಸತ್ಪಾಲ್ ಬ್ರಹ್ಮಚಾರಿ ಅವರು ವಿನೇಶ್ ಫೋಗಟ್ ಅವರಿಗೆ ಸಾಥ್ ನೀಡಿದರು.
ವಿನೇಶ್ ಫೋಗಟ್ ನಾಮಪತ್ರ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ದೀಪೇಂದರ್ ಹೂಡಾ ಅವರು, ಫೋಗಟ್ ಪಕ್ಷಕ್ಕೆ "ದೊಡ್ಡ ಗೆಲುವು" ನೀಡಲಿದ್ದಾರೆ ಮತ್ತು ಜುಲಾನಾದಲ್ಲಿ ಮಾತ್ರವಲ್ಲ, ಭೂಪಿಂದರ್ ಸಿಂಗ್ ಹೂಡಾ ನೇತೃತ್ವದಲ್ಲಿ ಹರಿಯಾಣ ವಿಧಾನಸಭೆಯಲ್ಲಿ ಕಾಂಗ್ರೆಸ್ ಸಂಪೂರ್ಣ ಬಹುಮತ ಪಡೆಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಹುಡಾ ಸಾಹೇಬ್ ನೇತೃತ್ವದಲ್ಲಿ ಕಾಂಗ್ರೆಸ್ ಅನ್ನು ಅಧಿಕಾರಕ್ಕೆ ತರಬೇಕು ಮತ್ತು ಬಿಜೆಪಿಯನ್ನು ಕಿತ್ತೊಗೆಯಬೇಕು ಎಂದು ಜನ ಮನಸ್ಸು ಮಾಡಿದ್ದಾರೆ ಎಂದು ಹೂಡಾ ಹೇಳಿದರು.
ಜಾಟ್ ಪ್ರಾಬಲ್ಯದ ಜೂಲಾನಾ ವಿಧಾನಸಭಾ ಕ್ಷೇತ್ರದಲ್ಲಿ ಒಲಿಂಪಿಯನ್ ಕುಸ್ತಿಪಟು ಫೋಗಟ್ ವಿರುದ್ಧ ಬಿಜೆಪಿ ಮಾಜಿ ಪೈಲಟ್ ಯೋಗೇಶ್ ಬೈರಾಗಿ ಅವರನ್ನು ಕಣಕ್ಕಿಳಿಸಿದೆ.
ಮುಂದಿನ ತಿಂಗಳು ನಡೆಯಲಿರುವ ಹರಿಯಾಣ ವಿಧಾನಸಭೆ ಚುನಾವಣೆಗೆ ನಾಮಪತ್ರ ಸಲ್ಲಿಸಲು ಗುರುವಾರ ಕೊನೆಯ ದಿನವಾಗಿದೆ.
Advertisement