Shimla: ಅಕ್ರಮವಾಗಿ ಮಸೀದಿ ನಿರ್ಮಾಣ; ಹಿಂದೂ ಸಂಘಟನೆಗಳ ಬೃಹತ್ ಪ್ರತಿಭಟನೆ, ಲಾಠಿ ಚಾರ್ಜ್!

ಮುನ್ನೆಚ್ಚರಿಕೆ ಕ್ರಮವಾಗಿ ಸಂಜೌಲಿಯಲ್ಲಿ ಪೊಲೀಸರು ಇಂದು ಬಿಎನ್​ಎಸ್​ ಸೆಕ್ಷನ್​ 163 (ನಿಷೇಧಾಜ್ಞೆ) ಜಾರಿ ಮಾಡಿದ್ದಾರೆ.
illegal construction at Shimla mosque
ಶಿಮ್ಲಾದಲ್ಲಿ ಹಿಂದೂಪರ ಸಂಘಟನೆಗಳ ಪ್ರತಿಭಟನೆ
Updated on

ಶಿಮ್ಲಾ: ಹಿಮಾಚಲ ಪ್ರದೇಶದ ರಾಜಧಾನಿ ಶಿಮ್ಲಾದಲ್ಲಿ ಅಕ್ರಮವಾಗಿ ನಿರ್ಮಾಣ ಮಾಡಲಾಗಿರುವ ಮಸೀದಿ ತೆರವಿಗೆ ಆಗ್ರಹಿಸಿ ಹಿಂದೂಪರ ಸಂಘಟನೆಗಳು ಬೃಹತ್ ಪ್ರತಿಭಟನೆ ನಡೆಸಿದ್ದು, ಈ ವೇಳೆ ಲಾಠಿಚಾರ್ಜ್ ನಡೆಸಲಾಗಿದೆ.

ಹೌದು.. ಶಿಮ್ಲಾದ ಸಂಜೌಲಿ ಪ್ರದೇಶದಲ್ಲಿ ಅಕ್ರಮವಾಗಿ ಮಸೀದಿ ನಿರ್ಮಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿ ಹಿಂದೂ ಸಂಘಟನೆಗಳು ಬೃಹತ್ ಪ್ರತಿಭಟನೆ ನಡೆಸಿವೆ.

ಅಕ್ರಮವಾಗಿ ನಿರ್ಮಿಸಿರುವ ಪ್ರಾರ್ಥನಾ ಮಂದಿರವನ್ನು ತೆರವುಗೊಳಿಸಬೇಕು. ರಾಜ್ಯಕ್ಕೆ ಆಗಮಿಸುವ ಹೊರಗಿನವರ ನೋಂದಣಿ ಮಾಡಬೇಕು ಎಂದು ಹಿಂದೂ ಸಂಘಟನೆಗಳು ಆಗ್ರಹಿಸಿವೆ.

ಲಾಠಿಚಾರ್ಜ್

ಈ ನಡುವೆ ಪ್ರತಿಭಟನಾ ನಿರತರು ಮತ್ತು ಪೊಲೀಸರ ನಡುವೆ ಘರ್ಷಣೆ ಸಂಭವಿಸಿದ್ದು, ಪ್ರತಿಭಟನಾಕಾರರು ಕೂಡಲೇ ಮಸೀದಿ ತೆರವು ಮಾಡುವಂತೆ ಆಗ್ರಹಿಸಿದ್ದಾರೆ. ಅಲ್ಲದೆ ಪೊಲೀಸರು ಡಲಿ ಸುರಂಗ ಮಾರ್ಗದ ಬಳಿ ಹಾಕಿದ್ದ ಬ್ಯಾರಿಕೇಡ್ ಗಳನ್ನು ಧ್ವಂಸ ಮಾಡಿದ್ದಾರೆ. ಪರಿಸ್ಥಿತಿ ನಿಭಾಯಿಸಲು ಪೊಲೀಸರು ಲಾಠಿಚಾರ್ಜ್ ನಡೆಸಿದ್ದು, ಜಲಫಿರಂಗಿ ಬಳಸಿದ್ದಾರೆ. ಈ ವೇಳೆ ಹಲವರಿಗೆ ಗಾಯಗಳಾಗಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ನಿಷೇಧಾಜ್ಞೆ ಜಾರಿ

ಈ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಸಂಜೌಲಿಯಲ್ಲಿ ಪೊಲೀಸರು ಇಂದು ಬಿಎನ್​ಎಸ್​ ಸೆಕ್ಷನ್​ 163 (ನಿಷೇಧಾಜ್ಞೆ) ಜಾರಿ ಮಾಡಿದ್ದಾರೆ. ಬೆಳಗ್ಗೆ 7ರಿಂದ ರಾತ್ರಿ 11.59ರವರೆಗೆ ನಿಷೇಧಾಜ್ಞೆ ಜಾರಿಯಲ್ಲಿ ಇರಲಿದೆ ಎಂದು ಶಿಮ್ಲಾ ಜಿಲ್ಲಾಧಿಕಾರಿ ಅನೂಪ್​ ಕಶ್ಯಪ್​ ತಿಳಿಸಿದ್ದಾರೆ.

ಶಾಂತಿ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಮುಂಜಾಗ್ರತಾ ಕ್ರಮವಾಗಿ ಸಂಜೌಲಿ ನಗರದಲ್ಲಿ ಯಾವುದೇ ಅನುಮತಿ ಇಲ್ಲದೇ ಘೋಷಣೆ, ಪ್ರತಿಭಟನೆ, ಧರಣಿ ನಡೆಸುವುದಕ್ಕೆ ಅವಕಾಶವಿಲ್ಲ. ಶಸಾಸ್ತ್ರಗಳು ಹಾಗೂ ದಹನಶೀಲ ವಸ್ತುಗಳನ್ನು ಸಾಗಿಸುವುದನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ. ನಗರದ ಎಲ್ಲಾ ರಸ್ತೆಗಳಲ್ಲಿ ಬ್ಯಾರಿಕೇಡ್​ ಹಾಕಲಾಗಿದ್ದು, ಪೊಲೀಸ್​ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

ಶಾಂತಿಯುತ ಪ್ರತಿಭಟನೆಗೆ ಮಾತ್ರ ಅವಕಾಶ: ಸಿಎಂ ಎಚ್ಚರಿಕೆ

ಇನ್ನು ಈ ಕುರಿತು ಮಾತನಾಡಿರುವ ಸಿಎಂ ಸುಖ್ವೀಂದರ್​ ಸಿಂಗ್​ ಸುಖು, "ಜನರಿಗೆ ಶಾಂತಿಯುತವಾಗಿ ಪ್ರತಿಭಟನೆ ಮಾಡುವ ಹಕ್ಕಿದೆ. ಆದರೆ, ಯಾವುದೇ ಸಮುದಾಯದಿಂದ ಯಾವುದೇ ಹಾನಿ ಆಗಬಾರದು. ಜನರು ಇದಕ್ಕೆ ಯಾವುದೇ ರಾಜಕೀಯ ಬಣ್ಣ ನೀಡದೆ ಕಾನೂನು ಸುವ್ಯವಸ್ಥೆಯನ್ನು ಕಾಪಾಡಬೇಕು" ಎಂದು ಮನವಿ ಮಾಡಿದ್ದಾರೆ.

ಇನ್ನು ಮಸೀದಿಗೆ ಸಂಬಂಧಿಸಿದಂತೆ, ಮಸೀದಿ ನಿರ್ಮಾಣದ ವಿಷಯವು ಪ್ರಸ್ತುತ ಪುರಸಭೆಯ ಪರಿಶೀಲನೆಯಲ್ಲಿದೆ. ಕಾನೂನಿನ ಪ್ರಕಾರ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ.

ಏತನ್ಮಧ್ಯೆ, ವಿರೋಧ ಪಕ್ಷದ ನಾಯಕ ಜೈರಾಮ್ ಠಾಕೂರ್ ಅವರು ಸುಖು ಸರ್ಕಾರವನ್ನು ಟೀಕಿಸಿದ್ದು, ಅಕ್ರಮ ನಿರ್ಮಾಣ ವಿವಾದ ಪರಿಹರಿಸುವಲ್ಲಿ ವಿಳಂಬ ಧೋರಣೆ ಅನುಸರಿಸುತ್ತಿದೆ ಎಂದು ಕಿಡಿಕಾರಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com