ಕೋಲ್ಕತ್ತ: ಆರ್ ಜಿ ಕಾರ್ ಆಸ್ಪತ್ರೆಯಲ್ಲಿನ ಬಿಕ್ಕಟ್ಟು ಪರಿಹರಿಸಲು ಪಶ್ಚಿಮ ಬಂಗಾಳದ ಸಚಿವಾಲಯ ಬಳಿಗೆ ಮಾತುಕತೆಗೆ ತೆರಳಿದ್ದ ಪ್ರತಿಭಟನಾನಿರತ ಕಿರಿಯ ವೈದ್ಯರ ಗುಂಪೊಂದು, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸಮ್ಮುಖದಲ್ಲಿ ಮಾತುಕತೆಯ ಪ್ರಸ್ತಾವನೆಯನ್ನು ತಿರಸ್ಕರಿಸಿತು.
ಸಂಜೆ 5.25 ರ ಸುಮಾರಿಗೆ ಸೆಕ್ರೆಟರಿಯೇಟ್ ತಲುಪಿದ ಪ್ರತಿಭಟನಾಕಾರರು, ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ವೇದಿಕೆ ಬಳಿ ಸಭೆ ನಡೆಸಿದರೂ ವೇದಿಕೆ ಒಳಗಡೆ ತೆರಳಲಿಲ್ಲ. ಈ ವೇಳೆ ಎರಡೂ ಕಡೆಯ ನಡುವೆ ತೀವ್ರ ಮಾತಿನ ಚಕಮಕಿ ನಡೆಯಿತು. ಇಬ್ಬರೂ ತಮ್ಮ ತಮ್ಮ ನಿಲುವುಗಳಿಗೆ ಅಂಟಿಕೊಂಡರು. ಈ ಎಲ್ಲಾವುಗಳ ಮಧ್ಯೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸಭೆ ನಡೆಸಲು ವೇದಿಕೆಯಲ್ಲಿ ಕಾಯುತ್ತಾ ಕುಳಿತಿದ್ದರು.
ಕಿರಿಯ ವೈದ್ಯರು ಸಭೆಗೆ ಹೋಗಲು ನಿರಾಕರಿಸಿದ ನಂತರ ಮಾತನಾಡಿದ ಮಮತಾ ಬ್ಯಾನರ್ಜಿ, ಜನರ ಹಿತಾಸಕ್ತಿ ರಕ್ಷಿಸುವ ಸಲುವಾಗಿ ನನ್ನ ರಾಜೀನಾಮೆಗೂ ಸಿದ್ಧ, ಆರ್ ಜಿ ಕಾರ್ ಆಸ್ಪತ್ರೆಯ ವೈದ್ಯೆಯ ಅತ್ಯಾಚಾರ ಹಾಗೂ ಕೊಲೆಗೆ ನಾನು ಕೂಡಾ ನ್ಯಾಯ ಬಯಸುತ್ತೇನೆ ಎಂದರು.
ಆರ್ ಜಿ ಕಾರ್ ಆಸ್ಪತ್ರೆ ಪ್ರಕರಣ ಪ್ರಸ್ತುತ ವಿಚಾರಣೆ ಹಂತದಲ್ಲಿರುವುದರಿಂದ ಕಿರಿಯ ವೈದ್ಯರ ಮನವಿಯಂತೆ ಸಭೆಯ ನೇರಪ್ರಸಾರ (live-streamed) ಮಾಡಲಾಗುವುದಿಲ್ಲ, ಆದಾಗ್ಯೂ, ವೀಡಿಯೊ ರೆಕಾರ್ಡ್ ಮಾಡಲು ವ್ಯವಸ್ಥೆ ಮಾಡಲಾಗಿತ್ತು ಮತ್ತು ಸುಪ್ರೀಂ ಕೋರ್ಟ್‌ನ ಅನುಮತಿಯೊಂದಿಗೆ,ಈ ರೆಕಾರ್ಡಿಂಗ್ ಅನ್ನು ಅವರೊಂದಿಗೆ ಹಂಚಿಕೊಳ್ಳಬಹುದಿತ್ತು. ಆಸ್ಪತ್ರೆಯ ಬಿಕ್ಕಟ್ಟು ಪರಿಹರಿಸಲು ಕಿರಿಯ ವೈದ್ಯರೊಂದಿಗೆ ಮಾತುಕತೆಗೆ ಮೂರು ಬಾರಿ ಪ್ರಯತ್ನಿಸಿದೆ. ಇಂದು ಆರ್‌ಜಿ ಕಾರ್ ಬಿಕ್ಕಟ್ಟಿಗೆ ಅಂತ್ಯವನ್ನು ನಿರೀಕ್ಷಿಸಿದ್ದ ಬಂಗಾಳದ ಜನರಲ್ಲಿ ನಾನು ಕ್ಷಮೆಯಾಚಿಸುತ್ತೇನೆ ಎಂದು ಮುಖ್ಯಮಂತ್ರಿ ಪಿಟಿಐ ಸುದ್ದಿಸಂಸ್ಥೆಗೆ ತಿಳಿಸಿದರು.
ಸಭೆಯ ನೇರ ಪ್ರಸಾರ ಸಾಧ್ಯವಿಲ್ಲ. ಆದರೆ ಸಾಕ್ಷಿಯಾಗಿ, ಇಡೀ ಸೆಷನ್ಸ್ ನ್ನು ವಿಡಿಯೋ ರೆಕಾರ್ಡ ಮಾಡಲು ಅವಕಾಶ ನೀಡುವುದಾಗಿ ಪತ್ರದ ಮೂಲಕ ಭರವಸೆ ನೀಡಲಾಗಿತ್ತು. ಮುಖ್ಯಮಂತ್ರಿ ಸುಮಾರು ಒಂದೂವರೆ ಗಂಟೆಗಳ ಕಾಲ ಕಾಯ್ದಿದ್ದಾರೆ. ಇಂತಹ ಬೇಡಿಕೆಗೂ ಒಂದು ಮಿತಿ ಇರುತ್ತದೆ. ವೈದ್ಯರ ಮನವೊಲಿಸಲು ನಾವು ಪ್ರಯತ್ನಿಸಿದೇವು. ಆದರೆ, ಅವರು ಇನ್ನೂ ನಮ್ಮ ಮನವಿಗೆ ಒಪ್ಪಿಲ್ಲ. ಈ ಸಭೆಗೆ ಪಾಲ್ಗೊಳ್ಳುವಂತೆ ಅವರಿಗೆ ಮನವಿ ಕಳುಹಿಸಲಾಗಿತ್ತು ಎಂದು ಮುಖ್ಯ ಕಾರ್ಯದರ್ಶಿ ಪಂತ್ ತಿಳಿಸಿದ್ದಾರೆ.
ಇದಕ್ಕೂ ಮುನ್ನಾ, ಇಂದು ನಡೆಯಲಿರುವ ಸಭೆಗೆ ಪಾಲ್ಗೊಳ್ಳುವಂತೆ ಪ್ರತಿಭಟನಾನಿರತ ಕಿರಿಯ ವೈದ್ಯರಿಗೆ ಪಶ್ಚಿಮ ಬಂಗಾಳ ಸರ್ಕಾರದಿಂದ ಹೊಸದಾದ ಆಹ್ವಾನ ಪತ್ರ ಕಳುಹಿಸಲಾಗಿತ್ತು. ಆರ್ ಜಿ ಕಾರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿನ 31 ವರ್ಷದ ಜ್ಯೂನಿಯರ್ ಡಾಕ್ಟರ್ ಮೇಲಿನ ಅತ್ಯಾಚಾರ ಹಾಗೂ ಕೊಲೆಯನ್ನು ಖಂಡಿಸಿ ಕಿರಿಯ ವೈದ್ಯರು ಸುಮಾರು ಒಂದು ತಿಂಗಳಿನಿಂದ ಪ್ರತಿಭಟನೆ ನಡೆಸುತ್ತಿದ್ದಾರೆ.
Advertisement