Madhya Pradesh: ಪ್ರವಾಸಕ್ಕೆ ಬಂದಿದ್ದ ತರಬೇತಿ ಸೇನಾಧಿಕಾರಿಗಳ ಮೇಲೆ ಡಕಾಯಿತರ ದಾಳಿ; ಗರ್ಲ್ ಫ್ರೆಂಡ್ ಮೇಲೆ ಗ್ಯಾಂಗ್ ರೇಪ್
ಭೋಪಾಲ್: ಪ್ರವಾಸಕ್ಕೆಂದು ಬಂದಿದ್ದ ಇಬ್ಬರು ತರಬೇತಿ ನಿರತ ಸೇನಾಧಿಕಾರಿಗಳ ಮೇಲೆ ಡಕಾಯಿತರು ದಾಳಿ ನಡೆಸಿದ್ದು ಮಾತ್ರವಲ್ಲದೇ ಜೊತೆಗಿದ್ದ ಅವರ ಸ್ನೇಹಿತೆಯರ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿರುವ ಆಘಾತಕಾರಿ ಘಟನೆ ಮಧ್ಯ ಪ್ರದೇಶದಲ್ಲಿ ನಡೆದಿದೆ.
ಮಧ್ಯಪ್ರದೇಶದ ಇಂಧೋರ್ ಜಿಲ್ಲೆಯಲ್ಲಿ ಬುಧವಾರ ಈ ಘಟನೆ ನಡೆದಿದ್ದು, ಮಹೌ ಕಂಟೋನ್ಮೆಂಟ್ ಪ್ರದೇಶದ ಇನ್ಫ್ಯಾಂಟ್ರಿ ಸ್ಕೂಲ್ ನಲ್ಲಿ ಯುವ ಅಧಿಕಾರಿಗಳಾಗಿ ತರಬೇತಿ ಪಡೆಯುತ್ತಿದ್ದ, 23 ಹಾಗೂ 24 ವಯಸ್ಸಿನ ಇಬ್ಬರು ಅಧಿಕಾರಿಗಳು ಪಿಕ್ ನಿಕ್ ಗೆ ತೆರಳಿದ್ದ ವೇಳೆ ಈ ಘಟನೆ ಸಂಭವಿಸಿದೆ ಎಂದು ಬಡಗೊಂಡ ಪೊಲೀಸ್ ಠಾಣಾಧಿಕಾರಿ ಲೋಕೇಂದ್ರ ಸಿಂಗ್ ಹಿರೋರ್ ಹೇಳಿದ್ದಾರೆ.
ಪೊಲೀಸ್ ಮೂಲಗಳ ಪ್ರಕಾರ, 'ಬುಧವಾರ ನಸುಕಿನ 2 ಗಂಟೆಯ ವೇಳೆಗೆ ಏಳು ಮಂದಿ ಅಪರಿಚಿತರು ಮಹೌ- ಮಂಡಲೇಶ್ವರ ರಸ್ತೆಯ ಈ ಪಿಕ್ನಿಕ್ ತಾಣಕ್ಕೆ ಬಂದು, ಅಲ್ಲಿ ಕಾರಿನಲ್ಲಿ ಕುಳಿತಿದ್ದ ಅಧಿಕಾರಿ ಹಾಗೂ ಯುವತಿಯನ್ನು ಥಳಿಸಿದರು. ಈ ವೇಳೆ ಓರ್ವ ಯುವತಿಯ ಮೇಲೆ ದುಷ್ಕರ್ಮಿಗಳು ಗನ್ ತೋರಿಸಿ ಬೆದರಿಸಿ ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ. ಬಳಿಕ ಇಬ್ಬರು ಯುವತಿಯರನ್ನು ವಶದಲ್ಲಿಟ್ಟುಕೊಂಡು ಹಣ ತರಲು ಅಧಿಕಾರಿಗಳಿಗೆ ಬೆದರಿಕೆ ಹಾಕಿದ್ದಾರೆ. ಕೂಡಲೇ ಮತ್ತೋರ್ವ ಅಧಿಕಾರಿ ಸಮೀಪದಲ್ಲೇ ಇದ್ದ ಸೇನಾ ಕ್ಯಾಂಪ್ ಗೆ ಓಡಿ ಬಂದು ಮಾಹಿತಿ ತಿಳಿಸಿದ್ದಾರೆ. ಈ ವೇಳೆ ಅಧಿಕಾರಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ವಿಚಾರ ತಿಳಿಯುತ್ತಲೇ ಸ್ಥಳಕ್ಕೆ ಪೊಲೀಸರು ದೌಡಾಯಿಸಿದ್ದು, ಪೊಲೀಸರನ್ನು ನೋಡಿದ ತಕ್ಷಣ ಕಿಡಿಗೇಡಿಗಳು ಪರಾರಿಯಾಗಿದ್ದಾರೆ. ಎಲ್ಲ ನಾಲ್ಕು ಮಂದಿ ಸಂತ್ರಸ್ತರನ್ನು ಮಹೌ ಸಿವಿಲ್ ಆಸ್ಪತ್ರೆಗೆ ಮುಂಜಾನೆ 6.30ರ ವೇಳೆಗೆ ವೈದ್ಯಕೀಯ ಪರೀಕ್ಷೆಗಾಗಿ ಕರೆತಂದಿದ್ದು, ಅಧಿಕಾರಿಗಳ ಮೈಮೇಲೆ ಗಾಯದ ಗುರುತುಗಳಿವೆ ಎಂದು ವೈದ್ಯರು ಹೇಳಿದ್ದಾರೆ. ಯುವತಿಯರ ಪೈಕಿ ಒಬ್ಬಾಕೆಯ ಮೇಲೆ ಕಿಡಿಗೇಡಿಗಳು ಅತ್ಯಾಚಾರ ಎಸಗಿದ್ದನ್ನು ವೈದ್ಯಕೀಯ ಪರೀಕ್ಷೆ ದೃಢಪಡಿಸಿದೆ.
ಕಿಡಿಗೇಡಿಗಳ ಮೇಲೆ ಭಾರತೀಯ ನ್ಯಾಯ ಸಂಹಿತೆ ಸೆಕ್ಷನ್ ಗಳಡಿ ಲೂಟಿ, ಡಕಾಯಿತಿ, ಅತ್ಯಾಚಾರ ಹಾಗೂ ಶಸ್ತ್ರಾಸ್ತ್ರ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ ಎಂದು ಇಂಧೋರ್ ಗ್ರಾಮೀಣ ಎಸ್ಪಿ ಹಿತಿಕಾ ವಸಲ್ ಹೇಳಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ