
ಕೋಲ್ಕತ್ತ: ಆರ್. ಜಿ. ಕಾರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿನ ಮಹಿಳಾ ಟ್ರೈನಿ ವೈದ್ಯೆ ಮೇಲಿನ ಅತ್ಯಾಚಾರ ಹಾಗೂ ಕೊಲೆಯನ್ನು ಖಂಡಿಸಿ ಕಿರಿಯ ವೈದ್ಯರು ನಡೆಸುತ್ತಿರುವ ಮುಷ್ಕರದಿಂದ ಆರೋಗ್ಯ ಸೇವೆಯಲ್ಲಿ ವ್ಯತ್ಯಯವಾಗಿ ಮೃತಪಟ್ಟ ಕುಟುಂಬ ಸದಸ್ಯರಿಗೆ ಪಶ್ಚಿಮ ಬಂಗಾಳ ಸರ್ಕಾರ ಪರಿಹಾರವನ್ನು ಘೋಷಿಸಿದೆ.
ಆಗಸ್ಟ್ 9 ರಂದು ಟ್ರೈನಿ ಡಾಕ್ಟರ್ ಮೇಲೆ ಅತ್ಯಾಚಾರ ಹಾಗೂ ಕೊಲೆ ನಡೆದಿತ್ತು. ಅಂದಿನಿಂದ ಪಶ್ಚಿಮ ಬಂಗಾಳ ಹಾಗೂ ರಾಷ್ಟ್ರದಾದ್ಯಂತ ಕಿರಿಯ ವೈದ್ಯರು ಪ್ರತಿಭಟನೆ ನಡೆಸುತ್ತಿದ್ದು, ಸಂತ್ರಸ್ತೆಗೆ ನ್ಯಾಯ ಒದಗಿಸಬೇಕು ಹಾಗೂ ವೈದ್ಯರ ಸುರಕ್ಷತೆ ಖಾತ್ರಿಗೆ ಕಾಯ್ದೆ ಜಾರಿಗೆ ಆಗ್ರಹಿಸುತ್ತಿದ್ದಾರೆ.
ಕಿರಿಯ ವೈದ್ಯರ ಧೀರ್ಘಾವಧಿಯ ಪ್ರತಿಭಟನೆಯಿಂದಆರೋಗ್ಯ ಸೇವೆ ವ್ಯತ್ಯಯವಾಗಿ 29 ಮಂದಿ ಸಾವನ್ನಪ್ಪಿರುವುದು ದುರದೃಷ್ಟಕರ ಎಂದಿರುವ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ತಮ್ಮವರನ್ನು ಕಳೆದುಕೊಂಡ ಕುಟುಂಬಕ್ಕೆ ನೆರವಾಗಲು ಮೃತರ ಸದಸ್ಯರ ತಲಾ 2 ಲಕ್ಷ ರೂ. ಪರಿಹಾರವನ್ನು ಸರ್ಕಾರ ಘೋಷಿಸಿರುವುದಾಗಿ ತಿಳಿಸಿದ್ದಾರೆ.
ಆರ್ ಜಿ ಕಾರ್ ಆಸ್ಪತ್ರೆಯಲ್ಲಿನ ಬಿಕ್ಕಟ್ಟು ಪರಿಹರಿಸಲು ನಿನ್ನೆ ಪ್ರತಿಭಟನಾನಿರತ ಕಿರಿಯ ವೈದ್ಯರೊಂದಿಗೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸಭೆ ಆಯೋಜಿಸಲಾಗಿತ್ತು. ಆದರೆ, ವೇದಿಕೆಗೆ ತೆರಳದ ಕಿರಿಯ ವೈದ್ಯರು ಪ್ರವೇಶದ್ವಾರದಲ್ಲಿಯೇ ಸಭೆ ನಡೆಸಿದರು. ಸುಮಾರು ಒಂದೂವರೆ ಗಂಟೆಗಳ ಕಾಲ ವೇದಿಕೆಯಲ್ಲಿಯೇ ಕಾಯುತ್ತಿದ್ದ ಕುಳಿತಿದ್ದ ಮಮತಾ ಬ್ಯಾನರ್ಜಿ ಜನರ ಹಿತಾಸಕ್ತಿ ರಕ್ಷಿಸುವ ಸಲುವಾಗಿ ನನ್ನ ರಾಜೀನಾಮೆಗೂ ಸಿದ್ಧ ಎಂದಿದ್ದರು.
Advertisement