
ನವದೆಹಲಿ: ದೆಹಲಿ ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದ ಭ್ರಷ್ಟಾಚಾರ ಪ್ರಕರಣದಲ್ಲಿ ಶುಕ್ರವಾರ ಜಾಮೀನು ಪಡೆದ ಕೆಲವೇ ಗಂಟೆಗಳ ನಂತರ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಆರು ತಿಂಗಳ ನಂತರ ತಿಹಾರ್ ಜೈಲಿನಿಂದ ಬಿಡುಗಡೆಯಾದರು.
ಎಎಪಿ ಮುಖ್ಯಸ್ಥನಿಗಾಗಿ ಜೈಲಿನ ಹೊರಗೆ ಕಾಯುತ್ತಿದ್ದ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಮತ್ತು ದೆಹಲಿ ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಸೇರಿದಂತೆ ಪಕ್ಷದ ಹಲವು ನಾಯಕರು, ಕಾರ್ಯಕರ್ತರು ದೆಹಲಿ ಮುಖ್ಯಮಂತ್ರಿಯನ್ನು ಸ್ವಾಗತಿಸಿದರು.
ಜೈಲುವಾಸದ ವೇಳೆ ತನಗೆ ಬೆಂಬಲ ನೀಡಿದವರಿಗೆ ಅರವಿಂದ್ ಕೇಜ್ರಿವಾಲ್ ಅವರು ಕೃತಜ್ಞತೆ ಸಲ್ಲಿಸಿದರು. "ನನ್ನ ಬಿಡುಗಡೆಗಾಗಿ ಪ್ರಾರ್ಥಿಸಿದ ಮತ್ತು ಮಳೆಯನ್ನು ಲೆಕ್ಕಿಸದೇ ಇಲ್ಲಿಗೆ ಬರುವ ಧೈರ್ಯಮಾಡಿದ ಎಲ್ಲರಿಗೂ ನಾನು ಧನ್ಯವಾದ ಹೇಳಲು ಬಯಸುತ್ತೇನೆ" ಎಂದು ಜೈಲಿನಿಂದ ಹೊರಬಂದ ಬಳಿಕ ಕೇಜ್ರಿವಾಲ್ ಹೇಳಿದರು.
ನನ್ನ ಪ್ರತಿಯೊಂದು ರಕ್ತದ ಹನಿಯೂ ಈ ದೇಶಕ್ಕೆ ಸಮರ್ಪಿತವಾಗಿದೆ. ನಾನು ಕಷ್ಟಗಳನ್ನು ಎದುರಿಸಿದ್ದೇನೆ. ಆದರೆ ದೇವರು ಯಾವಾಗಲೂ ನನ್ನೊಂದಿಗಿದ್ದಾನೆ. ಅವರು(ಬಿಜೆಪಿ) ನನ್ನ ನೈತಿಕತೆಯನ್ನು ಕುಗ್ಗಿಸಲು ನನ್ನನ್ನು ಜೈಲಿಗೆ ಹಾಕಿದರು. ಆದರೆ ನನ್ನ ನೈತಿಕತೆ ಹಿಂದೆಂದಿಗಿಂತಲೂ ಈಗ ಹೆಚ್ಚಾಗಿದೆ; ಜೈಲುಗಳು ನನ್ನನ್ನು ದುರ್ಬಲಗೊಳಿಸುವುದಿಲ್ಲ ಎಂದರು.
ಈ ದೇಶವನ್ನು ದುರ್ಬಲಗೊಳಿಸುವ ಗುರಿಯನ್ನು ಹೊಂದಿರುವ "ದೇಶವಿರೋಧಿ ಶಕ್ತಿಗಳು" ವಿರುದ್ಧದ ತಮ್ಮ ಹೋರಾಟವನ್ನು ಮುಂದುವರೆಸುವುದಾಗಿ ಕೇಜ್ರಿವಾಲ್ ಪ್ರತಿಜ್ಞೆ ಮಾಡಿದರು.
Advertisement