Arvind Kejriwal
ಅರವಿಂದ ಕೇಜ್ರಿವಾಲ್File Photo | PTI

ದೆಹಲಿ ಅಬಕಾರಿ ನೀತಿ ಹಗರಣ: ಸಿಎಂ ಕೇಜ್ರಿವಾಲ್'ಗೆ ಜಾಮೀನು ಮಂಜೂರು

6 ದಿನಗಳ ಬಳಿಕ ಕೇಜ್ರಿವಾಲ್‌ ಅವರಿಗೆ ಸುಪ್ರೀಂ ಕೋರ್ಟ್ ಜಾಮೀನು ನೀಡಿದ್ದು, ನ್ಯಾಯಮೂರ್ತಿ ಸೂರ್ಯ ಕಾಂತ್ ಮತ್ತು ನ್ಯಾಯಮೂರ್ತಿ ಉಜ್ಜಲ್ ಭುಯಾನ್ ಅವರ ಪೀಠ ಈ ತೀರ್ಪು ನೀಡಿದೆ.
Published on

ನವದೆಹಲಿ: ದೆಹಲಿ ಅಬಕಾರಿ ನೀತಿ ಹಗರಣದಲ್ಲಿ ಜೈಲುಪಾಲಾಗಿರುವ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಗೆ ಸುಪ್ರೀಂಕೋರ್ಟ್​ ಜಾಮೀನು ಮಂಜೂರು ಮಾಡಿದೆ.

6 ದಿನಗಳ ಬಳಿಕ ಕೇಜ್ರಿವಾಲ್‌ ಅವರಿಗೆ ಸುಪ್ರೀಂ ಕೋರ್ಟ್ ಜಾಮೀನು ನೀಡಿದ್ದು, ನ್ಯಾಯಮೂರ್ತಿ ಸೂರ್ಯ ಕಾಂತ್ ಮತ್ತು ನ್ಯಾಯಮೂರ್ತಿ ಉಜ್ಜಲ್ ಭುಯಾನ್ ಅವರ ಪೀಠ ಈ ತೀರ್ಪು ನೀಡಿದೆ.

ನ್ಯಾಯಪೀಠವು ಕೇಜ್ರಿವಾಲ್ ಅವರಿಗೆ 10 ಲಕ್ಷ ರೂ ಬಾಂಡ್, ಎರಡು ಶ್ಯೂರಿಟಿಗಳೊಂದಿಗೆ ಜಾಮೀನು ಮಂಜೂರು ಮಾಡಿದ್ದರೂ ಕೇಜ್ರಿವಾಲ್ ಅವರನ್ನು ಸಿಬಿಐ ಬಂಧಿಸಿದ್ದು ಸಿಂಧುವೇ ಆಗಿದ್ದು, ಅದು ಸಂಬಂಧಿತ ಕಾರ್ಯವಿಧಾನದ ಕಾನೂನುಗಳ ಅನುಸಾರವಾಗಿಯೇ ಇದೆ ಎಂದು ತಿಳಿಸಿದೆ.

ಸಿಬಿಐ ತಮ್ಮನ್ನು ಬಂಧಿಸಿರುವುದರ ಸಿಂಧುತ್ವ ಹಾಗೂ ತಮಗೆ ಜಾಮೀನು ನೀಡುವಂತೆ ಕೋರಿ ಕೇಜ್ರಿವಾಲ್‌ ಅವರು ಎರಡು ಪ್ರತ್ಯೇಕ ಅರ್ಜಿಗಳನ್ನು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ್ದರು.

ಇದರಂತೆ ಎರಡನೇ ಅರ್ಜಿಗೆ ಸಮ್ಮತಿಸಿರುವ ನ್ಯಾಯಾಲಯ ಮೊದಲನೆಯ ಅರ್ಜಿಯನ್ನು ತಿರಸ್ಕರಿಸಿದೆ. ಈಗಾಗಲೇ ಮತ್ತೊಂದು ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನದಲ್ಲಿರುವ ವ್ಯಕ್ತಿಯನ್ನು ತನಿಖೆಯ ಉದ್ದೇಶಕ್ಕಾಗಿ ಬಂಧಿಸಲು ಯಾವುದೇ ಅಡ್ಡಿಯಿಲ್ಲ. ಸಿಬಿಐ ತಮ್ಮ ಅರ್ಜಿಯಲ್ಲಿ ನ್ಯಾಯಾಂಗದ ಆದೇಶವಿದ್ದುದರಿಂದ ಬಂಧನ ಮಾಡಬೇಕಾಯಿತು ಎಂದು ತಿಳಿಸಿದೆ.

ಇದು ಕ್ರಿಮಿನಲ್‌ ಪ್ರಕ್ರಿಯಾ ಸಂಹಿತೆಯ ಸೆಕ್ಷನ್‌ 41 (ಎ) (3) ಉಲ್ಲಂಘನೆಯಲ್ಲ ಎಂದು ನ್ಯಾಯಾಲಯ ವಿವರಿಸಿದೆ. ಮ್ಯಾಜಿಸ್ಟ್ರೇಟ್‌ ನ್ಯಾಯಾಲಯ ವಾರೆಂಟ್‌ ಹೊರಡಿಸಿದ್ದಾಗ ತನಿಖಾ ಸಂಸ್ಥೆ ಅದಕ್ಕೆ ಕಾರಣ ನೀಡುವುದರಿಂದ ಮುಕ್ತವಾಗಿರುತ್ತದೆ. ಅರ್ಜಿದಾರ ಬಂಧನ ಯಾವುದೇ ಕಾರ್ಯವಿಧಾನದ ಲೋಪದಿಂದ ಬಳಲುತ್ತಿಲ್ಲ. ಹೀಗಾಗಿ ಬಂಧನ ಮಾನ್ಯವಾಗಿದೆ ಎಂದು ಹೇಳಿದೆ.

ಇದೇ ವೇಳೆ ವಿಚಾರಣೆಗೆ ವಿನಾಯಿತಿ ನೀಡದ ಹೊರತು ಪ್ರಸ್ತುತ ಪ್ರಕರಣದ ಕುರಿತು ಸಾರ್ವಜನಿಕವಾಗಿ ಯಾವುದೇ ಹೇಳಿಕೆ ನೀಡದಂತೆ ಕೇಜ್ರಿವಾಲ್‌ಗೆ ನ್ಯಾಯಾಲಯ ಸೂಚನೆ ನೀಡಿದೆ.

ಕೇಜ್ರಿವಾಲ್ ಅವರ ಬಿಡುಗಡೆಯು ಹರಿಯಾಣ ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ ಬಂದಿದ್ದು, ಇದರಿಂದ ಆಮ್‌ ಆದ್ಮಿ ಪಕ್ಷಕ್ಕೆ ಹೆಚ್ಚಿನ ಬಲ ಸಿಕ್ಕಂತಾಗಿದೆ.

ಹರಿಯಾಣದಲ್ಲಿ ಆಮ್ ಆದ್ಮಿ ಪಕ್ಷವು, ಬಿಜೆಪಿ ಹಾಗೂ ಇಂಡಿಯಾ ಬ್ಲಾಕ್‌ನ ಪಾಲುದಾರರಾಗಿರುವ ಕಾಂಗ್ರೆಸ್‌ಗೆ ದೊಡ್ಡ ಸವಾಲು ನೀಡುತ್ತಿದೆ.

ಈ ನಡುವೆ ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಅವರಿಗೆ ಸುಪ್ರೀಂ ಕೋರ್ಟ್ ಜಾಮೀನು ನೀಡಿದ ಬೆನ್ನಲ್ಲೇ ಆಮ್‌ ಆದ್ಮಿ ಪಕ್ಷ ತನ್ನ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದು ‘ಸತ್ಯ ಮೇವ ಜಯತೆ’ ಎಂದು ಹೇಳಿದೆ.

ಅಬಕಾರಿ ನೀತಿ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾರ್ಚ್ 21 ರಂದು ಕೇಜ್ರಿವಾಲ್ ಅವರನ್ನು ಇಡಿ ಬಂಧನಕ್ಕೊಳಪಡಿಸಿತ್ತು. 10 ದಿನಗಳ ವಿಚಾರಣೆಯ ನಂತರ ಕೇಜ್ರಿವಾಲ್ ಅವರನ್ನು ಏಪ್ರಿಲ್ 1 ರಂದು ತಿಹಾರ್ ಜೈಲಿಗೆ ಕಳುಹಿಸಲಾಯಿತು. ಮೇ 10 ರಂದು, ಅವರನ್ನು ಸಾರ್ವತ್ರಿಕ ಚುನಾವಣೆಯಲ್ಲಿ ಪ್ರಚಾರಕ್ಕಾಗಿ 21 ದಿನಗಳ ಕಾಲ ಬಿಡುಗಡೆ ಮಾಡಲಾಗಿತ್ತು.

ಜೈಲಿನಲ್ಲಿ ಕಳೆದ ಒಟ್ಟು ಸಮಯ 177 ದಿನಗಳು, ಅದರಲ್ಲಿ 21 ದಿನಗಳನ್ನು ಕಳೆದರೆ ಕೇಜ್ರಿವಾಲ್ ಒಟ್ಟು 156 ದಿನಗಳ ಕಾಲ ಜೈಲಿನಲ್ಲಿದ್ದರು.

Arvind Kejriwal
ಅಬಕಾರಿ ನೀತಿ ಹಗರಣ: ದೆಹಲಿ ಸಿಎಂ ಕೇಜ್ರಿವಾಲ್‌ಗೆ ತೀವ್ರ ಹಿನ್ನಡೆ; ಮಧ್ಯಂತರ ಜಾಮೀನು ನೀಡಲು ಸುಪ್ರೀಂ ಕೋರ್ಟ್ ನಕಾರ

ಏನಿದು ಅಬಕಾರಿ ನೀತಿ ಹಗರಣ?

ಅಬಕಾರಿ ವಲಯದ ಸುಧಾರಣೆಗಾಗಿ ದೆಹಲಿ ಆಪ್‌ ಸರ್ಕಾರವು 2021ರಲ್ಲಿ ದಿಲ್ಲಿ ಅಬಕಾರಿ ನೀತಿಯನ್ನು ಜಾರಿಗೆ ತಂದಿತ್ತು. ಈ ನೀತಿ ಅನ್ವಯ ಖಾಸಗಿ ಕಂಪನಿಗಳು ಮತ್ತು ಉದ್ಯಮಗಳಿಗೆ ಚಿಲ್ಲರೆ ಮದ್ಯ ಮಾರಾಟಕ್ಕೆ ಅವಕಾಶ ಕಲ್ಪಿಸಲಾಯಿತು. ಆದರೆ, ಸರ್ಕಾರವು ತನ್ನ ಪರವಾಗಿರುವ ಕಂಪನಿಗಳು, ಉದ್ಯಮಗಳ ಮಾಲೀಕರಿಗೆ ನೆರವು ನೀಡುತ್ತಿದೆ. ಜೊತೆಗೆ, ಲಂಚ ಪಡೆದು ಹೊಸಬರಿಗೆ ಪರವಾನಿಗೆ ನೀಡಲಾಗಿದೆ ಎಂಬ ವ್ಯಾಪಕ ಆರೋಪ ಕೇಳಿ ಬಂದಿತ್ತು.

ಅಬಕಾರಿ ನೀತಿಯ ಮೂಲಕ ಭ್ರಷ್ಟಾಚಾರ ಎಸಗಲಾಗಿದೆ ಎಂಬ ಆರೋಪ ಪ್ರತಿಪಕ್ಷಗಳಿಂದ ಜೋರಾಗುತ್ತಿದ್ದಂತೆ, ದೆಹಲಿ ಲೆಫ್ಟಿನೆಂಟ್‌ ಗವರ್ನರ್‌ ಸಿಬಿಐ ತನಿಖೆಗೆ ಆದೇಶಿಸಿದರು. ಇ.ಡಿ ಕೂಡ ವಿಚಾರಣೆಗಿಳಿಯತು. 2022ರಲ್ಲಿ ನೀತಿಯನ್ನು ರದ್ದು ಕೂಡ ಮಾಡಲಾಯಿತು. ಇ.ಡಿ. ಪ್ರಕಾರ, ಈ ಹಗರಣ ದಿಂದ ದೆಹಲಿ ಸರ್ಕಾರಕ್ಕೆ 2631 ಕೋಟಿ ರೂ. ನಷ್ಟವಾಗಿದೆ ಎಂದು ತಿಳಿಸಿದೆ.

ಹಗರಣಕ್ಕೆ ಸಂಬಂಧಿಸಿದಂತೆ ಡಿಸಿಎಂ ಆಗಿದ್ದ ಮನೀಶ್‌ ಸಿಸೋಡಿಯಾ, ಆಪ್‌ ನಾಯಕ ಸಂಜಯ್‌ ಸಿಂಗ್‌, ತೆಲಂಗಾಣ ಮಾಜಿ ಸಿಎಂ ಕೆಸಿಆರ್‌ ಪುತ್ರಿ ಕೆ.ಕವಿತಾ ಮತ್ತು ಅರಬಿಂದೋ ಫಾರ್ಮಾ ಡೈರೆಕ್ಟರ್‌ ಪಿ ಶರತ್‌ ಚಂದ್ರ ರೆಡ್ಡಿ ಹಾಗೂ ಮತ್ತಿತರರು ಬಂಧನಕ್ಕೊಳಗಾಗಿದ್ದಾರೆ.

X

Advertisement

X
Kannada Prabha
www.kannadaprabha.com