
ಗುವಾಹಟಿ: ಅಸ್ಸಾಂನಲ್ಲಿ ಗುರುವಾರ ಸರ್ಕಾರಿ ಭೂಮಿ ಒತ್ತುವರಿ ತೆರವು ಕಾರ್ಯಾಚರಣೆ ವೇಳೆ ಹಿಂಸಾಚಾರ ನಡೆದಿದ್ದು, ಪೊಲೀಸರು ನಡೆಸಿದ ಗುಂಡಿನ ದಾಳಿಯಲ್ಲಿ ಇಬ್ಬರು ಮುಸ್ಲಿಂ ಯುವಕರು ಸಾವನ್ನಪ್ಪಿದ್ದಾರೆ.
ಗುವಾಹಟಿಯ ಹೊರವಲಯದಲ್ಲಿರುವ ಸೋನಾಪುರ ಕಂದಾಯ ವೃತ್ತದ ವ್ಯಾಪ್ತಿಯ ಕೊಚುತೋಲಿ ಗ್ರಾಮದಲ್ಲಿ ಈ ಘಟನೆ ನಡೆದಿದೆ.
ಪೊಲೀಸರ ಗುಂಡೇಟಿನಿಂದ ಗಂಭೀರವಾಗಿ ಗಾಯಗೊಂಡಿದ್ದ ಬೆಂಗಾಲಿ ಮಾತನಾಡುವ ಇಬ್ಬರು ಮುಸ್ಲಿಂ ಯುವಕರಾದ ಜುಬಾಹಿರ್ ಅಲಿ ಮತ್ತು ಹೈದರ್ ಅಲಿ, ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.
ಮ್ಯಾಜಿಸ್ಟ್ರೇಟ್ ಮತ್ತು ಪೊಲೀಸ್ ಸಿಬ್ಬಂದಿ ಸೇರಿದಂತೆ ಹತ್ತಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಘಟನೆಯಲ್ಲಿ ಎರಡು ಪೊಲೀಸ್ ವಾಹನಗಳಿಗೂ ಹಾನಿಯಾಗಿದ್ದು, ಸ್ಥಳದಲ್ಲಿ ಹೆಚ್ಚುವರಿ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
“ನಾವು ಸರ್ಕಾರಿ ಭೂಮಿ ಒತ್ತುವರಿ ತೆರವುಗೊಳಿಸುವಾಗ ಅವರು(ಗ್ರಾಮಸ್ಥರು) ವಿರೋಧಿಸಿದರು. ಸ್ವಲ್ಪ ಸಮಯದ ನಂತರ, ಅವರು ದೊಣ್ಣೆ ಮತ್ತು ಕಲ್ಲುಗಳಿಂದ ಅನೇಕರು ನಮ್ಮ ಮೇಲೆ ದಾಳಿ ಮಾಡಿದರು. ಹೀಗಾಗಿ ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಗುಂಡು ಹಾರಿಸಬೇಕಾಯಿತು’ ಎಂದು ಸರ್ಕಾರಿ ಅಧಿಕಾರಿಯೊಬ್ಬರು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಸೋಮವಾರದಿಂದ ಬುಧವಾರದವರೆಗೆ ತೆರವು ಕಾರ್ಯಾಚರಣೆ ಶಾಂತಿಯುತವಾಗಿ ನಡೆದಿತ್ತು. ಆದರೆ ಗುರುವಾರ ಅಧಿಕಾರಿಗಳು ಮತ್ತು ಪೊಲೀಸ್ ಸಿಬ್ಬಂದಿಯನ್ನು ಗ್ರಾಮಸ್ಥರು ಎದುರಿಸಿದ್ದರಿಂದ ಹಿಂಸಾಚಾರಕ್ಕೆ ತಿರುಗಿತು ಎಂದು ಪೊಲೀಸರು ಹೇಳಿದ್ದಾರೆ.
ಈ ಹಿಂದೆ ಭೂಮಿಯನ್ನು ತೆರವುಗೊಳಿಸಲಾಗಿತ್ತು. ಆದರೆ ಗ್ರಾಮಸ್ಥರು ಪುನಃ ಅದನ್ನು ವಶಪಡಿಸಿಕೊಂಡಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Advertisement