ಮೀರಟ್ : ಉತ್ತರ ಪ್ರದೇಶದ ಈ ಜಿಲ್ಲೆಯಲ್ಲಿ ಮೂರು ಅಂತಸ್ತಿನ ಮನೆ ಕುಸಿದು 3 ಸಾವನ್ನಪ್ಪಿ, ಇಬ್ಬರು ಗಾಯಗೊಂಡಿದ್ದರೆ, 7 ಮಂದಿ ಅವಶೇಷಗಳಡಿ ಸಿಲುಕಿಕೊಂಡಿದ್ದಾರೆ.
ಶನಿವಾರದಂದು ಮೀರಟ್ ನಲ್ಲಿ ಈ ಘಟನೆ ನಡೆದಿದ್ದು, "ಮನೆಯ ಕಟ್ಟಡವೊಂದು ಹಠಾತ್ ಕುಸಿತದಿಂದ ಈ ಅನಾಹುತ ಸಂಭವಿಸಿದೆ. 12 ಮಂದಿ ಅವಶೇಷಗಳ ಅಡಿಯಲ್ಲಿ ಸಿಲುಕಿದ್ದರು. ಇದುವರೆಗೆ, 5 ಜನರನ್ನು ಅವಶೇಷಗಳಿಂದ ಹೊರತೆಗೆಯಲಾಗಿದೆ. ಅವರಲ್ಲಿ, ಮೂವರು ಸಾವನ್ನಪ್ಪಿದ್ದಾರೆ ಮತ್ತು ಇಬ್ಬರು ಗಾಯಗೊಂಡವರನ್ನು ಲಾಲಾ ಲಜಪತ್ ರಾಯ್ ಸ್ಮಾರಕ ವೈದ್ಯಕೀಯ ಕಾಲೇಜಿಗೆ ದಾಖಲಿಸಲಾಗಿದೆ" ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಸಂಜೆ 5:15 ರ ಸುಮಾರಿಗೆ ಘಟನೆ ಸಂಭವಿಸಿದ್ದು, ತುರ್ತು ಸೇವೆಗಳಿಗೆ ತಕ್ಷಣ ಮಾಹಿತಿ ನೀಡಲಾಗಿದೆ. ಜಾಕಿರ್ ಕಾಲೋನಿಯಲ್ಲಿ ಈ ಘಟನೆ ನಡೆದಿದ್ದು ಆರಂಭದಲ್ಲಿ ಸುಮಾರು ಆರು ಮಂದಿ ಅವಶೇಷಗಳಡಿ ಸಿಲುಕಿದ್ದಾರೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ. ಹಿರಿಯ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿ ರಕ್ಷಣಾ ಕಾರ್ಯಾಚರಣೆಯ ಮೇಲ್ವಿಚಾರಣೆ ನಡೆಸಿದ್ದಾರೆ.
ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ, ಅಗ್ನಿಶಾಮಕ ದಳ ಮತ್ತು ಪೊಲೀಸ್ ತಂಡಗಳು ಅವಶೇಷಗಳಡಿ ಸಿಲುಕಿರುವವರನ್ನು ರಕ್ಷಿಸುವ ಕಾರ್ಯದಲ್ಲಿ ನಿರತವಾಗಿವೆ.
Advertisement