ನಾಗಪುರ: ನಾನು ಪ್ರಧಾನಿ ಹುದ್ದೆಯ ರೇಸ್‌ಗೆ ಇಳಿದರೆ ಬೆಂಬಲಿಸುವುದಾಗಿ ಲೋಕಸಭಾ ಚುನಾವಣೆ ವೇಳೆಯಲ್ಲಿ ರಾಜಕೀಯ ನಾಯಕರೊಬ್ಬರು ಭರವಸೆ ನೀಡಿದ್ದರು. ಆದರೆ, ಅದು ನನ್ನ ಮಹತ್ವಾಕಾಂಕ್ಷೆ ಅಲ್ಲ ಎಂದು ಹೇಳಿ ಆ ಆಫರ್ ತಿರಸ್ಕರಿಸಿದಾಗಿ ಕೇಂದ್ರ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.
ಪತ್ರಿಕೋದ್ಯಮ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ನಿತಿನ್ ಗಡ್ಕರಿ, "ನನಗೆ ಒಂದು ಘಟನೆ ನೆನಪಿದೆ. ನಾನು ಯಾರನ್ನೂ ಹೆಸರಿಸುವುದಿಲ್ಲ. ನೀವು ಪ್ರಧಾನಿ ಹುದ್ದೆಯ ರೇಸ್ ಗೆ ಇಳಿದರೆ ಬೆಂಬಲಿಸುವುದಾಗಿ ಆ ವ್ಯಕ್ತಿ ಹೇಳಿದ್ದರು. ಆದರೆ, ನೀವು ನನ್ನನ್ನು ಏಕೆ ಬೆಂಬಲಿಸಬೇಕು ಮತ್ತು ನಾನು ನಿಮ್ಮ ಬೆಂಬಲವನ್ನು ಏಕೆ ತೆಗೆದುಕೊಳ್ಳಬೇಕು ಎಂದು ನಾನು ಅವರನ್ನೇ ಪ್ರಶ್ನಿಸಿದೆ ಎಂದರು.
ಪ್ರಧಾನಿಯಾಗುವುದು ನನ್ನ ಜೀವನದ ಗುರಿಯಲ್ಲ. ನಾನು ನನ್ನ ನಂಬಿಕೆ ಮತ್ತು ಸಂಘಟನೆಗೆ ನಿಷ್ಠನಾಗಿದ್ದೇನೆ. ಯಾವುದೇ ಹುದ್ದೆಗೆ ರಾಜಿ ಮಾಡಿಕೊಳ್ಳಲು ಹೋಗುವುದಿಲ್ಲ. ನನ್ನ ನಂಬಿಕೆ ನನ್ನಗೆ ಅತಿ ಮುಖ್ಯ ಎಂದು ಹೇಳಿದ್ದಾಗಿ ತಿಳಿಸಿದರು. ಆದರೆ ಯಾವ ಸಂದರ್ಭದಲ್ಲಿ ಮಾತುಕತೆ ನಡೆಯಿತು ಎಂಬುದನ್ನು ನಿರ್ದಿಷ್ಟವಾಗಿ ಹೇಳಲಿಲ್ಲ.
ಪತ್ರಿಕೋದ್ಯಮ ಮತ್ತು ರಾಜಕೀಯ ಎರಡರಲ್ಲೂ ನೈತಿಕತೆಯ ಮಹತ್ವವನ್ನು ಒತ್ತಿ ಹೇಳಿದ ಗಡ್ಕರಿ, ನ್ಯಾಯಾಂಗ, ಕಾರ್ಯಾಂಗ, ಶಾಸಕಾಂಗ ಮತ್ತು ಮಾಧ್ಯಮಗಳು ನೈತಿಕತೆಯನ್ನು ಅನುಸರಿಸಿದಾಗ ಮಾತ್ರ ಪ್ರಜಾಪ್ರಭುತ್ವ ಯಶಸ್ವಿಯಾಗುತ್ತದೆ ಎಂದು ಹೇಳಿದರು.
Advertisement