ಇಂಫಾಲ: ಮಣಿಪುರದ ಪ್ರತಿಭಟನೆಗಳಲ್ಲಿ ಭದ್ರತಾ ಸಿಬ್ಬಂದಿಗಳನ್ನು ಟಾರ್ಗೆಟ್ ಮಾಡುವುದಕ್ಕಾಗಿ ಆಧುನಿಕ ಶಸ್ತ್ರಾಸ್ತ್ರಗಳ ಬಳಕೆಯಾಗುತ್ತಿರುವುದರ ಬಗ್ಗೆ ಮಣಿಪುರ ಪೊಲೀಸರು ಕಳವಳ ವ್ಯಕ್ತಪಡಿಸಿದ್ದಾರೆ.
ಪ್ರತಿಭಟನಾ ನಿರತರು ತಮ್ಮ ಭಾವನೆಗಳನ್ನು ವ್ಯಕ್ತಪಡಿಸುವುದಕ್ಕೆ ಇಂತಹ ನಡೆಗಳಿಂದ ದೂರವಿರಬೇಕು ಎಂದು ಪೊಲೀಸ್ ಅಧಿಕಾರಿಗಳು ಒತ್ತಾಯಿಸಿದ್ದಾರೆ.
ಈ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿರುವ ಡಿಐಜಿ (ರೇಂಜ್1) ಎನ್ ಹಿರೋಜಿತ್ ಸಿಂಗ್ "ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವುದು ಮತ್ತು ದುಷ್ಕರ್ಮಿಗಳ ಸಶಸ್ತ್ರ ದಾಳಿಗೆ ಪ್ರತ್ಯುತ್ತರ ನೀಡುವುದು ಪೊಲೀಸ್ ಇಲಾಖೆಯ ಕರ್ತವ್ಯ ಎಂಬುದನ್ನು ನಾವು ಸಾರ್ವಜನಿಕರಿಗೆ ನೆನಪಿಸಲು ಬಯಸುತ್ತೇವೆ. ಈ ಸವಾಲಿನ ಸಮಯದಲ್ಲಿ ನಾವು ಅನೇಕ ಸಾವುನೋವುಗಳನ್ನು ಅನುಭವಿಸಿದ್ದೇವೆ ಎಂದು ತಿಳಿಸಿದ್ದಾರೆ.
ಪ್ರತಿಭಟನಾ ತಂತ್ರಗಳಲ್ಲಿನ ಬದಲಾವಣೆಯನ್ನು ಎತ್ತಿ ತೋರಿದ ಡಿಐಜಿ, "ಇತ್ತೀಚಿನ ಆಂದೋಲನಗಳಲ್ಲಿ, ಸಾಂಪ್ರದಾಯಿಕ ಪ್ರತಿಭಟನೆಗಳನ್ನು ಭದ್ರತಾ ಪಡೆಗಳನ್ನು ಗುರಿಯಾಗಿಟ್ಟುಕೊಂಡು ಮಾರಣಾಂತಿಕ ವಿಧಾನಗಳೊಂದಿಗೆ ಬದಲಾಯಿಸಲಾಗಿದೆ. ಪ್ರತಿಭಟನಾಕಾರರು ಕಲ್ಲು ತೂರಾಟ, ಕವೆಗೋಲುಗಳಿಂದ ಕಬ್ಬಿಣದ ತುಂಡುಗಳನ್ನು ಗುಂಡು ಹಾರಿಸುವುದು, ಅಶ್ರುವಾಯು ಶೆಲ್‌ಗಳನ್ನು ಹಾರಿಸುವುದು ಮತ್ತು ಸ್ವಯಂಚಾಲಿತ ಬಂದೂಕುಗಳನ್ನು ಬಳಸುವುದರಲ್ಲಿ ತೊಡಗಿದ್ದಾರೆ" ಎಂದು ಹೇಳಿದ್ದಾರೆ.
"ಪ್ರತಿಭಟನೆಗಳ ಸಮಯದಲ್ಲಿ ಸ್ವಯಂಚಾಲಿತ ಶಸ್ತ್ರಾಸ್ತ್ರಗಳನ್ನು ಹಾರಿಸಿರುವ ಬಗ್ಗೆ ನಮ್ಮ ಬಳಿ ಪುರಾವೆಗಳಿವೆ. ಖಬೆಸೊಯ್‌ನಲ್ಲಿ, ಸ್ವಯಂಚಾಲಿತ ಶಸ್ತ್ರಾಸ್ತ್ರಗಳಿಂದ ಗುಂಡು ಹಾರಿಸಿದ್ದರಿಂದ ಇಂಫಾಲ್ ಪೂರ್ವ ಕಮಾಂಡೋ ಅಧಿಕಾರಿ ಮತ್ತು ಇನ್ನೊಬ್ಬ ಸಿಬ್ಬಂದಿ ಇತ್ತೀಚೆಗೆ ಗಾಯಗೊಂಡರು. ಇಂಫಾಲ್ ಪಶ್ಚಿಮ ಜಿಲ್ಲೆಯ ಕಕ್ವಾದಲ್ಲಿ, ನಮ್ಮ ವಾಹನಗಳ ಮೇಲೆ ಸ್ವಯಂಚಾಲಿತ ಶಸ್ತ್ರಾಸ್ತ್ರಗಳಿಂದ ಗುಂಡು ಹಾರಿಸಲಾಯಿತು." ಎಂದು ಪೊಲೀಸ್ ಡಿಐಜಿ ತಮ್ಮ ಆರೋಪಗಳನ್ನು ಸಮರ್ಥಿಸಿಕೊಂಡರು.
ಪ್ರತಿಭಟನಾ ನಿರತರು ಸಂಯಮ ಕಾಯ್ದುಕೊಳ್ಳಬೇಕೆಂದು ವಿನಂತಿಸಿದ ಸಿಂಗ್, ಪ್ರತಿಭಟನಾಕಾರರೊಂದಿಗೆ ವ್ಯವಹರಿಸುವಾಗ ಪೊಲೀಸ್ ಪಡೆಗಳು ಗರಿಷ್ಠ ಸಂಯಮವನ್ನು ಬಳಸುತ್ತವೆ ಎಂದು ನಾವು ಹೇಳಲು ಬಯಸುತ್ತೇವೆ ಎಂದು ಹೇಳಿದ್ದಾರೆ.
Advertisement