ಚಂಡೀಗಢ: ಹರಿಯಾಣ ವಿಧಾನಸಭೆ ಚುನಾವಣೆಯಲ್ಲಿ ಪ್ರಮುಖ ಪಕ್ಷಗಳು ಕೇವಲ 51 ಮಹಿಳಾ ಅಭ್ಯರ್ಥಿಗಳನ್ನು ಕಣಕ್ಕಿಳಿಸಿವೆ. 2019ರ ಚುನಾವಣೆಯಲ್ಲಿ ಪಕ್ಷೇತರರು ಸೇರಿದಂತೆ 104 ಮಹಿಳಾ ಅಭ್ಯರ್ಥಿಗಳು ಕಣದಲ್ಲಿದ್ದರು.
ಕಾಂಗ್ರೆಸ್ 12 ಮಹಿಳಾ ಅಭ್ಯರ್ಥಿಗಳನ್ನು, ಐಎನ್‌ಎಲ್‌ಡಿ-ಬಿಎಸ್‌ಪಿ ಮೈತ್ರಿ 11, ಬಿಜೆಪಿ ಮತ್ತು ಎಎಪಿ ತಲಾ 10 ಮತ್ತು ಜೆಜೆಪಿ-ಆಜಾದ್ ಸಮಾಜ ಪಾರ್ಟಿ ಮೈತ್ರಿ 8 ಅಭ್ಯರ್ಥಿಗಳನ್ನು ಕಣಕ್ಕಿಳಿಸಿವೆ.
ಉಮೇದುವಾರಿಕೆ ಹಿಂಪಡೆಯಲು ಕೊನೆಯ ದಿನಾಂಕವಾದ ಸೆಪ್ಟೆಂಬರ್ 16 ರಂದು ಸ್ವತಂತ್ರ ಅಭ್ಯರ್ಥಿಗಳಾಗಿ ಸ್ಪರ್ಧಿಸುವ ಮಹಿಳಾ ಅಭ್ಯರ್ಥಿಗಳ ಸಂಖ್ಯೆ ಎಷ್ಟು ಎಂದು ಗೊತ್ತಾಗಲಿದೆ. ಕುರುಕ್ಷೇತ್ರ ಬಿಜೆಪಿ ಸಂಸದ ನವೀನ್ ಜಿಂದಾಲ್ ಅವರ ತಾಯಿ ಸಾವಿತ್ರಿ ಜಿಂದಾಲ್ ಅವರು ಆರೋಗ್ಯ ಸಚಿವ ಕಮಲ್ ಗುಪ್ತಾ ವಿರುದ್ಧ ಹಿಸಾರ್ ನಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ.
ರಾಜ್ಯದಲ್ಲಿ ಕಳೆದ 14 ವಿಧಾನಸಭಾ ಚುನಾವಣೆಗಳಲ್ಲಿ ಕೇವಲ 87 ಮಹಿಳೆಯರು ಮಾತ್ರ ಶಾಸಕರಾಗಿದ್ದಾರೆ ಎಂದು ಅಂಕಿಅಂಶ ತೋರಿಸುತ್ತದೆ. 2000 ನೇ ಇಸವಿಯಿಂದ ಕಳೆದ ಐದು ವಿಧಾನಸಭಾ ಚುನಾವಣೆಗಳಲ್ಲಿ 47 ಮಹಿಳೆಯರು ಶಾಸಕರಾಗಿದ್ದಾರೆ. 2000ರಲ್ಲಿ 49 ಮಂದಿ ಚುನಾವಣಾ ಕಣದಲ್ಲಿದ್ದರೆ, 2005ರಲ್ಲಿ 12 ಮಂದಿ ಹಾಗೂ 2009ರಲ್ಲಿ 9 ಮಂದಿ ಮಾತ್ರ ಶಾಸಕರಾಗಿ ಆಯ್ಕೆಯಾಗಿದ್ದರು.
2014 ರಲ್ಲಿ, ಹರಿಯಾಣವು 13 ಮಹಿಳಾ ಶಾಸಕರನ್ನು ಆಯ್ಕೆ ಮಾಡಿತು. 2019 ರಲ್ಲಿ, ಸಂಖ್ಯೆ 9 ಕ್ಕೆ ಇಳಿಯಿತು. 1954 ರಲ್ಲಿ PEPSU ನಲ್ಲಿ ಮಧ್ಯಂತರ ಚುನಾವಣೆಯಲ್ಲಿ ದಾದ್ರಿಯಿಂದ ಶಾಸಕರಾದ ಹರಿಯಾಣ ಪ್ರದೇಶದ ಮೊದಲ ಮಹಿಳೆ ಚಂದ್ರಾವತಿ ಎಂಬುವವರಾಗಿದ್ದಾರೆ.
ಹರಿಯಾಣವು ಲಿಂಗಾನುಪಾತದ ಅಂತರಕ್ಕೆ ಕುಖ್ಯಾತಿ ಪಡೆದ ರಾಜ್ಯವಾಗಿದೆ. ಕಳೆದ ವರ್ಷ 1,000 ಪುರುಷರಿಗೆ 916 ಹೆಣ್ಣುಮಕ್ಕಳ ಜನನವಾಗಿದೆ. ರಾಜಕೀಯ ಪಕ್ಷಗಳು ಮಹಿಳೆಯರಿಗೆ ಸಾಕಷ್ಟು ಪ್ರಾತಿನಿಧ್ಯವನ್ನು ನೀಡುವುದಿಲ್ಲ. ಅವರ ಏಕೈಕ ಗುರಿ ಗರಿಷ್ಠ ಗೆಲುವಿನ ಅವಕಾಶಗಳೊಂದಿಗೆ ಅಭ್ಯರ್ಥಿಗಳನ್ನು ಕಣಕ್ಕಿಳಿಸುವುದಾಗಿದೆ. ಪಕ್ಷದ ಉನ್ನತ ನಾಯಕರೊಂದಿಗಿನ ಇರುವ ಒಡನಾಟದಿಂದ ಟಿಕೆಟ್ ಸಿಗುವುದು ಮತ್ತು ರಾಜಕೀಯ ಪ್ರೋತ್ಸಾಹ ನಿರ್ಧಾರವಾಗುತ್ತದೆ ಎಂದು ರಾಜಕೀಯ ವಿಶ್ಲೇಷಕ ರಣಬೀರ್ ಸಿಂಗ್ ತಿಳಿಸಿದ್ದಾರೆ.
ಹರ್ಯಾಣ ಗ್ರಾಮೀಣ ಭಾಗದಲ್ಲಿ ಆರ್ಥಿಕತೆಯಲ್ಲಿ ಮಹಿಳೆಯರು ಪ್ರಮುಖ ಪಾತ್ರ ವಹಿಸುತ್ತಾರೆ ಆದರೆ ಸಾಂಸ್ಕೃತಿಕ ಮತ್ತು ಸಾಮಾಜಿಕ ಅಂಶಗಳಲ್ಲಿ ನಿರ್ಧಾರ ತೆಗೆದುಕೊಳ್ಳುವ ಶಕ್ತಿಯ ಕೊರತೆಯು ಒಂದು ವಿರೋಧಾಭಾಸವಾಗಿದೆ ಎಂದು ಅವರು ಹೇಳುತ್ತಾರೆ.
Advertisement