ನವದೆಹಲಿ: ಕೋಲ್ಕತ್ತದ ಆರ್‌ಜಿ ಕಾರ್ ಆಸ್ಪತ್ರೆಯಲ್ಲಿ ಟ್ರೈನಿ ವೈದ್ಯೆ ಮೇಲಿನ ಅತ್ಯಾಚಾರ ಮತ್ತು ಹತ್ಯೆಗೆ ಸಂಬಂಧಿಸಿದ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ನಲ್ಲಿ ಪಶ್ಚಿಮ ಬಂಗಾಳ ಸರ್ಕಾರವನ್ನು ಪ್ರತಿನಿಧಿಸಿದ್ದಕ್ಕಾಗಿ ತಮ್ಮ ಚೇಂಬರ್‌ನಲ್ಲಿರುವ ವಕೀಲರಿಗೆ ಅತ್ಯಾಚಾರದ ಬೆದರಿಕೆಗಳು ಬರುತ್ತಿವೆ ಎಂದು ಹಿರಿಯ ವಕೀಲ ಕಪಿಲ್ ಸಿಬಲ್ ಮಂಗಳವಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿದ್ದಾರೆ.
"ನನ್ನ ಚೇಂಬರ್‌ನಲ್ಲಿರುವ ಮಹಿಳೆಯರಿಗೆ ಬೆದರಿಕೆ ಇದೆ. ಅವರ ಮೇಲೆ ಆಸಿಡ್ ಎರಚಲಾಗುವುದು ಮತ್ತು ಅತ್ಯಾಚಾರ ನಡೆಸಲಾಗುವುದು ಎಂಬ ಕರೆಗಳು ಬರುತ್ತಿವೆ ಎಂದು ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಮತ್ತು ನ್ಯಾಯಮೂರ್ತಿಗಳಾದ ಜೆಬಿ ಪರ್ದಿವಾಲಾ ಮತ್ತು ಮನೋಜ್ ಮಿಶ್ರಾ ಅವರನ್ನೊಳಗೊಂಡ ಪೀಠಕ್ಕೆ ಸಿಬಲ್ ತಿಳಿಸಿದರು. .
ಪಶ್ಚಿಮ ಬಂಗಾಳದ ಕೋಲ್ಕತ್ತಾದ ಸರ್ಕಾರಿ ಸ್ವಾಮ್ಯದ ಆರ್‌ಜಿ ಕಾರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ನಡೆದಿದ್ದ 31 ವರ್ಷದ ಟ್ರೈನಿ ವೈದ್ಯೆಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ವಿಚಾರಣೆಯ live streaming ನಿಲ್ಲಿಸುವಂತೆ ಸಿಬಲ್ ನ್ಯಾಯಪೀಠವನ್ನು ಕೋರಿದರು. ಆದರೆ ನ್ಯಾಯಾಲಯ ಆ ಮನವಿಯನ್ನು ನಿರಾಕರಿಸಿತು.
ಆಗಸ್ಟ್ 9 ರಂದು ಕಾಲೇಜಿನ ಸೆಮಿನಾರ್ ಹಾಲ್‌ನಲ್ಲಿ ಮಹಿಳಾ ಟ್ರೈನಿ ಡಾಕ್ಟರ್ ಶವವಾಗಿ ಪತ್ತೆಯಾಗಿದ್ದರು. ಮರಣೋತ್ತರ ಪರೀಕ್ಷೆಯಲ್ಲಿ ಆಕೆಯನ್ನು ಅತ್ಯಾಚಾರ ಮಾಡಿ ಕೊಲೆ ಮಾಡಿರುವುದು ದೃಢಪಟ್ಟಿದೆ. ಈ ಘಟನೆಯು ರಾಷ್ಟ್ರವ್ಯಾಪಿ ಆಕ್ರೋಶವನ್ನು ಹುಟ್ಟು ಹಾಕಿದ್ದು, ವೈದ್ಯರ ಸುರಕ್ಷತೆಗಾಗಿ ಕಠಿಣ ಕಾನೂನು ರೂಪಿಸಬೇಕೆಂದು ಆಗ್ರಹಿಸಿ ದೇಶದ ವಿವಿಧ ಭಾಗಗಳಲ್ಲಿ ವೈದ್ಯರು ಪ್ರತಿಭಟನೆ ನಡೆಸುತ್ತಿದ್ದಾರೆ.
Advertisement