
ನವದೆಹಲಿ: ಕೇಂದ್ರ ದೆಹಲಿಯ ಕರೋಲ್ ಬಾಗ್ ಪ್ರದೇಶದಲ್ಲಿ ಬುಧವಾರ ಬೆಳಗ್ಗೆ ಮನೆ ಕುಸಿದು ಕನಿಷ್ಠ ನಾಲ್ವರು ಸಾವನ್ನಪ್ಪಿದ್ದಾರೆ ಮತ್ತು 14 ಮಂದಿ ಗಾಯಗೊಂಡಿದ್ದಾರೆ. ಅಲ್ಲದೆ ಕುಸಿದು ಬಿದ್ದ ಮನೆಯ ಒಂದು ಭಾಗದ ಅವಶೇಷಗಳಡಿ ಇನ್ನಷ್ಟು ಮಂದಿ ಸಿಲುಕಿರುವ ಶಂಕೆ ವ್ಯಕ್ತವಾಗಿದೆ.
ಕರೋಲ್ ಬಾಗ್‌ನ ಪ್ರಶಾದ್ ನಗರದಲ್ಲಿ ಮನೆಯೊಂದು ಕುಸಿದಿರುವ ಬಗ್ಗೆ ಇಂದು ಬೆಳಗ್ಗೆ 9.12 ಕ್ಕೆ ನಮಗೆ ಕರೆ ಬಂದಿತು. ನಂತರ ಐದು ಅಗ್ನಿಶಾಮಕ ಟೆಂಡರ್‌ಗಳು ತಕ್ಷಣವೇ ಸ್ಥಳಕ್ಕೆ ಕಳುಹಿಸಲಾಯಿತು ಎಂದು ದೆಹಲಿ ಅಗ್ನಿಶಾಮಕ ಸೇವೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮೂರು ಅಂತಸ್ತಿನ ಹಳೆಯ ಕಟ್ಟಡದ ಕೆಲವು ಭಾಗವು ಬೆಳಗ್ಗೆ ಕುಸಿದಿದೆ "ಹಲವು ಜನರು ಅವಶೇಷಗಳ ಅಡಿಯಲ್ಲಿ ಸಿಲುಕಿರುವ ಸಾಧ್ಯತೆಯಿದೆ ಎಂದು ವರದಿಯಾಗಿತ್ತು. ನಂತರ ಅವರನ್ನು ರಕ್ಷಿಸಲಾಗಿದೆ" ಎಂದು ದೆಹಲಿ ಅಗ್ನಿಶಾಮಕ ಸೇವೆಯ ನಿರ್ದೇಶಕ ಅತುಲ್ ಗರ್ಗ್ ಅವರು ಹೇಳಿದ್ದಾರೆ.
"ನಾವು ಇದುವರೆಗೆ 12 ಜನರನ್ನು ರಕ್ಷಿಸಿದ್ದೇವೆ, ಇನ್ನೂ ಕೆಲವರು ಸಿಕ್ಕಿಬಿದ್ದಿರುವ ಶಂಕೆ ಇದೆ". ಸ್ಥಳೀಯ ಪೊಲೀಸರು ಮತ್ತು ಇತರ ಏಜೆನ್ಸಿಗಳು ರಕ್ಷಣಾ ಕಾರ್ಯಾಚರಣೆ ನಡೆಸುತ್ತಿವೆ ಎಂದು ಉಪ ಪೊಲೀಸ್ ಆಯುಕ್ತ(ಕೇಂದ್ರ) ಎಂ ಹರ್ಷವರ್ಧನ್ ಅವರು ತಿಳಿಸಿದ್ದಾರೆ.
ದೆಹಲಿ ಪೊಲೀಸರು, ದೆಹಲಿ ಅಗ್ನಿಶಾಮಕ ಸೇವೆ(DFS), ಮತ್ತು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ(NDRF) ತಂಡಗಳನ್ನು ಒಳಗೊಂಡಿರುವ ರಕ್ಷಣಾ ಸಂಸ್ಥೆಗಳು ಪ್ರಸ್ತುತ ಅವಶೇಷಗಳನ್ನು ತೆರವುಗೊಳಿಸುತ್ತಿವೆ ಮತ್ತು ಅವಶೇಷಗಳಡಿಯಲ್ಲಿ ಸಿಲುಕಿರುವ ಮತ್ತಷ್ಟು ಜನರನ್ನು ಹುಡುಕುತ್ತಿವೆ.
Advertisement