ಮುಂಬೈ: ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಅವರ ತಂದೆ ಹಾಗೂ ಹೆಸರಾಂತ ಚಿತ್ರಕಥೆಗಾರ ಸಲೀಂ ಖಾನ್ ಅವರಿಗೆ ಬೆದರಿಕೆ ಹಾಕಲಾಗಿದೆ. ಮುಂಜಾನೆ ವಾಯು ವಿಹಾರದ ವೇಳೆಯಲ್ಲಿ ಸ್ಕೂಟರ್ ನಲ್ಲಿ ವ್ಯಕ್ತಿಯೊಬ್ಬರೊಂದಿಗೆ ಬಂದ ಬುರ್ಕಾಧಾರಿ ಮಹಿಳೆಯೊಬ್ಬರು 'ನಿಮ್ಮನ್ನು ಲಾರೆನ್ಸ್ ಬಿಷ್ಣೋಯಿ ಹತ್ತಿರ ಕಳುಹಿಸುತ್ತೇನೆ' ಎಂದು ಬೆದರಿಕೆ ಹಾಕಿದ್ದರು.
ಸಲ್ಮಾನ್ ಖಾನ್ ಅವರ ಬಾಂದ್ರಾ ನಿವಾಸಕ್ಕೆ ಬಿಷ್ಣೋಯಿ ಗ್ಯಾಂಗ್ ಗುಂಡು ಹಾರಿಸಿದ ಕೆಲ ತಿಂಗಳ ನಂತರ ಈ ಘಟನೆ ನಡೆದಿದೆ. ಜೈಲಿನಲ್ಲಿರುವ ಗ್ಯಾಂಗ್ ಸ್ಟರ್ ಲಾರೆನ್ಸ್ ಬಿಷ್ಣೋಯಿ ಹೆಸರು ಹೇಳಿ, ಬುರ್ಕಾಧಾರಿ ಮಹಿಳೆ ಸಲೀಂ ಖಾನ್ ಅವರಿಗೆ ಬೆದರಿಕೆ ಹಾಕಿದ್ದರು.ಈ ಸಂಬಂಧ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಬೆದರಿಕೆ ಹಾಕಿದ ನಂತರ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದರು. ಬಳಿಕ ಸಲೀಂ ಖಾನ್ ಅವರ ಅಂಗರಕ್ಷಕ ಬುಧವಾರ ಬಾಂದ್ರಾ ಪೊಲೀಸ್ ಠಾಣೆಯಲ್ಲಿ ದಾಖಲಿಸಿದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.
ಸಲೀಂ ಖಾನ್ ಅವರೊಂದಿಗೆ ಅನುಚಿತವಾಗಿ ವರ್ತಿಸಿರುವುದಾಗಿ ಆರೋಪಿಗಳು ವಿಚಾರಣೆ ವೇಳೆ ಪೊಲೀಸರಿಗೆ ತಿಳಿಸಿರುವುದಾಗಿ ಅಧಿಕಾರಿ ಹೇಳಿದರು.
Advertisement