
ಅಹಮದಾಬಾದ್: ಗುಜರಾತ್‌ನ ಜುನಾಗಢದ ಖಮಧ್ರೋಲ್ ಚೌಕ್‌ನಲ್ಲಿ ಅನಧಿಕೃತವಾಗಿ ಜಿಲ್ಲಾ ಬಿಜೆಪಿ ಕಚೇರಿಯನ್ನು ನಿರ್ಮಿಸಲಾಗಿದೆ ಎಂದು ಆರೋಪಿಸಿ ಮಾಜಿ ಕ್ಯಾಬಿನೆಟ್ ಸಚಿವ ಮತ್ತು ಬಿಜೆಪಿ ನಾಯಕ ಜವಾಹರ್ ಚಾವ್ಡಾ ಮತ್ತೊಂದು ಬಾಂಬ್ ಸಿಡಿಸಿದ್ದಾರೆ.
2017ರಲ್ಲಿ ಬಿಜೆಪಿ ಕಚೇರಿಯನ್ನು ಅಕ್ರಮವಾಗಿ ನಿರ್ಮಿಸಿರುವ ಬಗ್ಗೆ ಪುರಾವೆಗಳನ್ನು ಅಂದಿನ ಕಲೆಕ್ಟರ್‌ಗೆ ನೀಡಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಪತ್ರದಲ್ಲಿ ಚಾವ್ಡಾ ಆರೋಪಿಸಿದ್ದಾರೆ.
ಚಾವ್ಡಾ ಅವರು ಈ ಹಿಂದೆ ಪ್ರಧಾನಿಗೆ ಬರೆದ ಪತ್ರದಲ್ಲಿ ಜುನಾಗಢ ಜಿಲ್ಲಾ ಬಿಜೆಪಿ ಅಧ್ಯಕ್ಷ ಕಿರಿಟ್ ಪಟೇಲ್ ವಿರುದ್ಧ ಗಂಭೀರ ಆರೋಪ ಮಾಡಿದ್ದರು. ಕೇಸರಿ ಪಕ್ಷ ಕಾನೂನುಗಳನ್ನು ಉಲ್ಲಂಘಿಸಿ ಅಕ್ರಮವಾಗಿ ಜಿಲ್ಲಾ ಕಚೇರಿಯನ್ನು ನಿರ್ಮಿಸುತ್ತಿದೆ ಎಂದು ಆರೋಪಿಸಿ ಮತ್ತೊಂದು ಪತ್ರ ಬರೆದಿದ್ದರು.
ಚಾವ್ಡಾ ಅವರು 2017 ರ ಪತ್ರವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಅಕ್ರಮ ನಿರ್ಮಾಣಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿಗಳಿಗೆ ತಾವು ಹಿಂದೆ ನೀಡಿದ್ದ ದೂರುಗಳನ್ನು ಸಹ ಬಹಿರಂಗಪಡಿಸಿದ್ದಾರೆ.
ಜುನಾಗಢ್‌ನ ಖಮಧ್ರೋಲ್ ಚೌಕ್‌ನಲ್ಲಿ ದೀನ್ ದಯಾಳ್ ಭವನ ಎಂಬ ಹೆಸರಿನಲ್ಲಿ ನಿರ್ಮಿಸಲಾಗಿರುವ ಬಿಜೆಪಿ ಕಚೇರಿಯನ್ನು ಭೂ ಬಳಕೆ ಷರತ್ತುಗಳನ್ನು ಉಲ್ಲಂಘಿಸಿ ನಿರ್ಮಿಸಲಾಗಿದೆ ಎಂದು ಬಿಜೆಪಿ ನಾಯಕ ಪತ್ರದಲ್ಲಿ ಆರೋಪಿಸಿದ್ದಾರೆ. ಅಲ್ಲದೆ ಅಂದಿನ ಮುಖ್ಯಮಂತ್ರಿ, ಸಚಿವರು ಅಥವಾ ಯಾವುದೇ ಉನ್ನತ ಗಣ್ಯರು ಕಚೇರಿ ಉದ್ಘಾಟನೆ ಮಾಡದಂತೆ ತಡೆಯಬೇಕು ಎಂದು ಜಿಲ್ಲಾಧಿಕಾರಿಗೆ ಒತ್ತಾಯಿಸಿದ್ದರು.
Advertisement