ಕೋಲ್ಕತ್ತಾ: ಆರ್‌ಜಿ ಕರ್ ವೈದ್ಯಕೀಯ ಕಾಲೇಜು ಸಮಸ್ಯೆಗೆ ಸಂಬಂಧಿಸಿದಂತೆ ಮುಷ್ಕರವನ್ನು ನಿಲ್ಲಿಸಲು ಪಶ್ಚಿಮ ಬಂಗಾಳ ಸರ್ಕಾರದ ಕಿರಿಯ ವೈದ್ಯರು ಮತ್ತು ಅಧಿಕಾರಿಗಳ ನಡುವೆ ನಡೆದ ಎರಡನೇ ಸುತ್ತಿನ ಮಾತುಕತೆ ವಿಫಲವಾಗಿದೆ, ಸಭೆಯ ಲಿಖಿತ ವಿವರಗಳನ್ನು ನೀಡಲು ರಾಜ್ಯ ಸರ್ಕಾರ ನಿರಾಕರಿಸುತ್ತಿದ್ದು ನಾವು ಮುಷ್ಕರವನ್ನು ಹಿಂತೆಗೆದುಕೊಳ್ಳುವುದಿಲ್ಲ ಎಂದು ವೈದ್ಯರು ಹೇಳುತ್ತಿದ್ದಾರೆ.
ಸಭೆಯ ನಂತರ, ವೈದ್ಯಾಧಿಕಾರಿಗಳು ತಮ್ಮ ಪ್ರತಿಭಟನೆಯನ್ನು ಮುಂದುವರಿಸಿ ಮತ್ತು 'ಕೆಲಸ ನಿಲ್ಲಿಸಿ' ಚಳವಳಿಯನ್ನು ಮುಂದುವರೆಸುವುದಾಗಿ ಘೋಷಿಸಿದ್ದಾರೆ. ಸಭೆಯಲ್ಲಿ ಒಪ್ಪಿಗೆಯಂತೆ ಸರ್ಕಾರಿ ಆಸ್ಪತ್ರೆಗಳಲ್ಲಿನ ವೈದ್ಯರ ಸುರಕ್ಷತೆಯ ಕುರಿತು ಸರ್ಕಾರವು ಲಿಖಿತ ನಿರ್ದೇಶನಗಳನ್ನು ಹೊರಡಿಸಬೇಕಾಗುತ್ತದೆ.
ಮಾತುಕತೆಗಳು ಸುಗಮವಾಗಿ ನಡೆದು ಸಭೆ ಮುಗಿದ ನಂತರ ಚರ್ಚಿಸಿದ ವಿಷಯಗಳ ಸಹಿ ಮತ್ತು ಲಿಖಿತ ನಡಾವಳಿಗಳನ್ನು ನೀಡಲು ಸರ್ಕಾರ ನಿರಾಕರಿಸಿತು. ಸರ್ಕಾರದ ಧೋರಣೆಯಿಂದ ನಾವು ನಿರಾಶರಾಗಿದ್ದೇವೆ ಎಂದು ಧರಣಿ ನಿರತ ವೈದ್ಯರಲ್ಲಿ ಒಬ್ಬರಾದ ಡಾ ಅನಿಕೇತ್ ಮಹತೋ ಹೇಳಿದ್ದಾರೆ.
ನಾವು ನಮ್ಮ ಬೇಡಿಕೆಗಳನ್ನು ವಿವರಿಸುವ ಇಮೇಲ್ ನ್ನು ನಾಳೆ ಕಳುಹಿಸುತ್ತೇವೆ, ಅದರ ಆಧಾರದ ಮೇಲೆ ಸರ್ಕಾರವು ನಿರ್ದೇಶನಗಳನ್ನು ನೀಡುತ್ತದೆ ಎಂಬ ಭರವಸೆ ನೀಡಿದೆ. ನಾವು ನಮ್ಮ ಪ್ರತಿಭಟನೆ ಮುಂದುವರೆಸುತ್ತೇವೆ ಎಂದು ಮಹತೋ ಹೇಳಿದರು.
ಆರ್ ಜಿ ಕರ್ ಆಸ್ಪತ್ರೆಯ ಪಿಜಿ ಟ್ರೈನಿ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಿದ ಆರೋಪದ ಹಿನ್ನೆಲೆಯಲ್ಲಿ ಆರೋಗ್ಯ ಕಾರ್ಯದರ್ಶಿ ಎನ್ ಎಸ್ ನಿಗಮ್ ವಿರುದ್ಧ ಇಲಾಖಾ ತನಿಖೆಯನ್ನು ಆರಂಭಿಸಬೇಕೆಂಬ ವೈದ್ಯರ ಬೇಡಿಕೆಯನ್ನು ಒಪ್ಪಿಕೊಳ್ಳಲು ರಾಜ್ಯ ಸರ್ಕಾರ ನಿರಾಕರಿಸಿದೆ.
48 ಗಂಟೆಗಳಲ್ಲಿ ವೈದ್ಯಾಧಿಕಾರಿಗಳು ಮತ್ತು ರಾಜ್ಯ ಸರ್ಕಾರದ ನಡುವೆ ಇದು ಎರಡನೇ ಸುತ್ತಿನ ಮಾತುಕತೆಯಾಗಿದೆ. ಮೊನ್ನೆ ಸೋಮವಾರ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಕಾಳಿಘಾಟ್ ನಿವಾಸದಲ್ಲಿ ಮೊದಲ ಸುತ್ತಿನ ಮಾತುಕತೆ ನಡೆಸಿದ್ದರು.
ಮುಖ್ಯ ಕಾರ್ಯದರ್ಶಿ ಮನೋಜ್ ಪಂತ್ ನೇತೃತ್ವದ ರಾಜ್ಯ ಮಟ್ಟದ ಸಾರ್ವಜನಿಕ ಆರೋಗ್ಯ ಕಾರ್ಯಪಡೆ ಮತ್ತು 30 ಕಿರಿಯ ವೈದ್ಯರ ನಿಯೋಗದ ನಡುವಿನ ಸಭೆಯು ನಬನ್ನಾದಲ್ಲಿರುವ ರಾಜ್ಯ ಸಚಿವಾಲಯದಲ್ಲಿ ನಿನ್ನೆ ಸಾಯಂಕಾಲ 7 ಗಂಟೆ ಸುಮಾರಿಗೆ ಆರಂಭವಾಗಿ ಸುಮಾರು ಐದೂವರೆ ಗಂಟೆಗಳ ಕಾಲ ನಡೆಯಿತು.
Advertisement