
ದಿಂಡಿಗಲ್: ತಿರುಮಲ ತಿರುಪತಿ ದೇವಸ್ಥಾನಂ(ಟಿಟಿಡಿ) ಲಡ್ಡುಗಳನ್ನು ತಯಾರಿಸಲು ಬಳಸುವ ತುಪ್ಪದಲ್ಲಿ ಪ್ರಾಣಿಗಳ ಕೊಬ್ಬಿನಂಶವಿದೆ ಎಂಬ ಆರೋಪವನ್ನು ದೇವಸ್ಥಾನಕ್ಕೆ ತುಪ್ಪ ಪೂರೈಸುತ್ತಿರುವ ದಿಂಡುಗಲ್‌ನ ಎಆರ್ ಡೈರಿ ಫುಡ್ ಪ್ರೈವೇಟ್ ಲಿಮಿಟೆಡ್ ಶುಕ್ರವಾರ ಸ್ಪಷ್ಟವಾಗಿ ನಿರಾಕರಿಸಿದೆ.
ಟಿಟಿಡಿಗೆ ನಾವು ಉತ್ತಮ ಗುಣಮಟ್ಟದ ತುಪ್ಪವನ್ನು ಪೂರೈಸಿದ್ದೇವೆ. ಅದನ್ನು ಸಾಬೀತುಪಡಿಸಲು ನಾವು ಕಾನೂನು ಕ್ರಮ ಎದುರಿಸಲು ಸಿದ್ಧ ಎಂದು ಕಂಪನಿ ಹೇಳಿದೆ.
ರಾಷ್ಟ್ರೀಯ ಡೈರಿ ಅಭಿವೃದ್ಧಿ ಮಂಡಳಿ(ಎನ್‌ಡಿಡಿಬಿ)ಗೆ ಕಳುಹಿಸಲಾದ ತುಪ್ಪದ ಮಾದರಿಯಲ್ಲಿ ವಿದೇಶಿ ಕೊಬ್ಬು ಕಂಡುಬಂದಿದೆ ಎಂದು ಟಿಟಿಡಿ ಅಧಿಕಾರಿಗಳು ಹೇಳಿದ ನಂತರ ಕಂಪನಿಯು ತೀವ್ರ ಸಂಕಷ್ಟಕ್ಕೆ ಸಿಲುಕಿದೆ. ಎನ್‌ಡಿಡಿಬಿ ವರದಿಯ ನಂತರ, ಎಆರ್ ಡೈರಿ ಫುಡ್ ಪೂರೈಸಿದ ತುಪ್ಪದ ದಾಸ್ತಾನು ಹಿಂತಿರುಗಿಸಲಾಗಿದೆ.
ಈ ಕುರಿತು ಇಂದು ಸುದ್ಧಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಎಆರ್ ಡೈರಿ ಫುಡ್ ಪ್ರೈವೇಟ್ ಲಿಮಿಟೆಡ್ ನ ಕ್ವಾಲಿಟಿ ಕಂಟ್ರೋಲ್ ಮ್ಯಾನೇಜರ್‌ಗಳಾದ ಲೆನಿ ಮತ್ತು ಕಣ್ಣನ್ ಅವರು, ತಮ್ಮ ಕಂಪನಿಯು 20 ವರ್ಷಗಳಿಂದ ಈ ಕ್ಷೇತ್ರದಲ್ಲಿದೆ ಮತ್ತು ಉತ್ತಮ ಗುಣಮಟ್ಟದ ತುಪ್ಪವನ್ನು ಪೂರೈಸುತ್ತಿದೆ. ಕಂಪನಿಯ ವಿರುದ್ಧ ಸುಳ್ಳು ಆರೋಪಗಳನ್ನು ಹೊರಿಸಲಾಯಿತು. "ಎಆರ್ ಡೈರಿ ಫುಡ್ಸ್ ಜೂನ್ ಮತ್ತು ಜುಲೈ ತಿಂಗಳಲ್ಲಿ ಟಿಟಿಡಿಗೆ ತುಪ್ಪವನ್ನು ಪೂರೈಸಿದೆ" ಎಂದು ಹೇಳಿದರು.
ತುಪ್ಪದ ಒಟ್ಟು ಉತ್ಪಾದನೆಯಲ್ಲಿ ಶೇ. 0.5 ರಷ್ಟನ್ನು ಮಾತ್ರ ಟಿಟಿಡಿಗೆ ಕಳುಹಿಸಲಾಗಿದೆ. ಟಿಟಿಡಿಗೆ ತುಪ್ಪ ಕಳುಹಿಸುವ ಮುನ್ನ ಗುಣಮಟ್ಟ ಪರೀಕ್ಷೆ ಮಾಡಿದ್ದು, ಅದರ ವರದಿ ನಮ್ಮ ಬಳಿ ಇದೆ. ನಾವು ಟಿಟಿಡಿಗೆ ತುಪ್ಪ ಕಳುಹಿಸುವಾಗ ವರದಿಯ ಪ್ರತಿಯನ್ನು ಲಗತ್ತಿಸಲಾಗಿದೆ. ಲಡ್ಡು ತಯಾರಿಕೆಗೆ ಮಾತ್ರ ತುಪ್ಪವನ್ನು ಸರಬರಾಜು ಮಾಡಲಾಗಿದೆ. ಇತರ ಉದ್ದೇಶಗಳಿಗಾಗಿ ಅಲ್ಲ. ಟಿಟಿಡಿಗೆ ತುಪ್ಪವನ್ನು ಪೂರೈಸಿದ ಕಂಪನಿಗಳಲ್ಲಿ ನಾವೂ ಒಬ್ಬರು ಎಂದು ಅವರು ಹೇಳಿದರು.
TNIE ಯೊಂದಿಗೆ ಮಾತನಾಡಿದ ವ್ಯವಸ್ಥಾಪಕ ನಿರ್ದೇಶಕ ಆರ್ ರಾಜಶೇಖರ್, "ನಾವು ಉತ್ತಮ ಗುಣಮಟ್ಟದ ತುಪ್ಪವನ್ನು ಪೂರೈಸಿದ್ದೇವೆ. ಕಂಪನಿಯನ್ನು ಕಪ್ಪು ಪಟ್ಟಿಗೆ ಸೇರಿಸುವುದು ಸಾಮಾನ್ಯ ವಿಧಾನವಾಗಿದೆ. ನಮ್ಮನ್ನು ಕಪ್ಪು ಪಟ್ಟಿಗೆ ಸೇರಿಸಿದ ನಂತರ, ನಾವು ಅವರಿಗೆ ಉತ್ತರವಾಗಿ ಕಾನೂನು ಮಾನದಂಡಗಳ ಪ್ರಕಾರ ದಾಖಲೆಗಳನ್ನು ಕಳುಹಿಸಿದ್ದೇವೆ. ಈ ಕುರಿತ ತನಿಖೆಯಲ್ಲಿ ಕಂಪನಿಯು ತನ್ನ ಗುಣಮಟ್ಟವನ್ನು ಸಾಬೀತುಪಡಿಸಲು ಕಾನೂನು ಹೋರಾಟ ನಡೆಸಲು ಸಿದ್ಧವಾಗಿದೆ," ಎಂದು ತಿಳಿಸಿದ್ದಾರೆ.
Advertisement