ಅಯೋಧ್ಯೆ: ಖ್ಯಾತ ಧಾರ್ಮಿಕ ಕ್ಷೇತ್ರ ತಿರುಪತಿ ತಿರುಮಲ ದೇಗುಲದ ಲಡ್ಡು ಪ್ರಸಾದದಲ್ಲಿ ಪ್ರಾಣಿಗಳ ಕೊಬ್ಬು ಮಿಶ್ರಣವಾಗಿದೆ ಎಂಬ ಆಂಧ್ರ ಪ್ರದೇಶ ಸರ್ಕಾರದ ಹೇಳಿಕೆ ಬೆನ್ನಲ್ಲೇ ಅಯೋಧ್ಯೆ ರಾಮಮಂದಿರದಲ್ಲೂ ಇದೇ ಲಡ್ಡು ವಿತರಣೆಯಾಗಿರುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ಈ ಹಿಂದೆ ರಾಮಮಂದಿರ ಉದ್ಘಾಟನಾ ಕಾರ್ಯಕ್ರಮಕ್ಕೆ ತಿರುಮಲದಿಂದ ಟಿಟಿಡಿ ಸುಮಾರು 1 ಲಕ್ಷ ಲಡ್ಡುಗಳನ್ನು ರವಾನೆ ಮಾಡಿತ್ತು. ಈ ಲಡ್ಡುಗಳೂ ಕೂಡ ಕಲಬೆರಕೆ ಲಡ್ಡುಗಳಾಗಿತ್ತೇ ಎಂಬ ಅನುಮಾನ ಮೂಡುತ್ತಿದೆ. ಅಲ್ಲದೆ ತಿರುಪತಿಯಲ್ಲಿ ಲಡ್ಡು ಪ್ರಸಾದಕ್ಕೆ ತುಪ್ಪ ಪೂರೈಸಿದ ತಮಿಳುನಾಡಿನ ದಿಂಡಿಗಲ್‌ನ ಎಆರ್ ಡೈರಿ ಫುಡ್ಸ್ ಮೇಲೂ ಇದೀಗ ತನಿಖಾ ತೂಗುಗತ್ತಿ ತೂಗುತ್ತಿದೆ.
ಸನಾತನ ಧರ್ಮದ ವಿರುದ್ದ ಅಂತಾರಾಷ್ಟ್ರೀಯ ಸಂಚು
ಇನ್ನು ತಿರುಮಲ ಲಡ್ಡು ಪ್ರಸಾದದಲ್ಲಿ ಕೊಬ್ಬು ಮಿಶ್ರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಅಯೋಧ್ಯೆ ರಾಮಜನ್ಮಭೂಮಿಯ ಪ್ರಧಾನ ಅರ್ಚಕ ಆಚಾರ್ಯ ಸತ್ಯೇಂದ್ರ ದಾಸ್ ಅವರು, "ಮೀನಿನ ಎಣ್ಣೆಯನ್ನು ಬೆರೆಸಿರುವುದು ತಪಾಸಣೆಯಿಂದ ಸ್ಪಷ್ಟವಾಗಿದೆ.. ಇದೆಲ್ಲ ಯಾವಾಗಿಂದ ನಡೆಯುತ್ತಿದೆ ಎಂಬುದು ಇನ್ನೂ ತಿಳಿದಿಲ್ಲ, ಇದು ಬಹುದೊಡ್ಡ ಅಂತಾರಾಷ್ಟ್ರೀಯ ಪಿತೂರಿಯಾಗಿದೆ. ಸನಾತನ ಧರ್ಮದ ಮೇಲಿನ ದಾಳಿಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು ಮತ್ತು ತಪ್ಪಿತಸ್ಥರನ್ನು ಶಿಕ್ಷಿಸಬೇಕು ಎಂದು ಆಗ್ರಹಿಸಿದ್ದಾರೆ.
ಕಲ್ಮಶ-ಕಳಪೆ ಮಟ್ಟದ ತುಪ್ಪ ಬಳಕೆ ಮಾಡಲಾಗುತ್ತಿತ್ತು: ರಮಣ ದೀಕ್ಷಿತುಲು
ತಿರುಮಲದಲ್ಲಿ ಶ್ರೀವಾರಿ ದೇಗುಲದಲ್ಲಿ ಲಡ್ಡು ಪ್ರಸಾದ ತಯಾರಿಕೆಗೆ ಬಳಕೆ ಮಾಡಲಾಗುತ್ತಿದ್ದ ತುಪ್ಪ ಕಲ್ಮಶವಾಗಿತ್ತು. ಕಳಪೆ ಗುಣಮಟ್ಟದ್ದಾಗಿತ್ತು, ನಾನು ಇದನ್ನು ಹಲವು ವರ್ಷಗಳ ಹಿಂದೆಯೇ ಗಮನಿಸಿದ್ದೇನೆ. ಅದನ್ನು ಸಂಬಂಧಪಟ್ಟ ಅಧಿಕಾರಿಗಳು ಮತ್ತು ಟ್ರಸ್ಟ್ ಬೋರ್ಡ್ ಅಧ್ಯಕ್ಷರ ಮುಂದೆ ಇಟ್ಟರೂ ಅವರು ತಲೆಕೆಡಿಸಿಕೊಳ್ಳಲಿಲ್ಲ. ಹೀಗಾಗಿ ನನ್ನದು ಏಕಾಂಗಿ ಹೋರಾಯವಾಯಿತು. ಕೋಟ್ಯಂತರ ಭಕ್ತರು ಅಪಾರ ನಂಬಿಕೆ ಮತ್ತು ಭಕ್ತಿ ಹೊಂದಿರುವ ಪವಿತ್ರ ದೇವಾಲಯದಲ್ಲಿ ಇಂತಹ ಮಹಾಪಾಪಗಳು ಪುನರಾವರ್ತನೆಯಾಗದಂತೆ ಎಚ್ಚರಿಕೆ ವಹಿಸಬೇಕು ಎಂದು ಹೇಳಿದ್ದಾರೆ.
ಕಠಿಣ ಕ್ರಮ ಶತಃ ಸಿದ್ಧ
ತಿರುಮಲ ಲಡ್ಡು ಪ್ರಸಾದದಲ್ಲಿ ಪ್ರಾಣಿಗಳ ಕೊಬ್ಬು ಮತ್ತು ಕಲಬೆರಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಮತ್ತೆ ಗರಂ ಆದ ಆಂದ್ರಪ್ರದೇಶ ಸಿಎಂ ಚಂದ್ರಬಾಬು ನಾಯ್ಡು ಅವರು, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ್ದಾರೆ. ಹಿಂದಿನ ಸರ್ಕಾರವು ತಿರುಮಲದಲ್ಲಿ ಪ್ರಸಾದದ ಪವಿತ್ರತೆಯನ್ನು ನಾಶಪಡಿಸಿದೆ. ಟಿಡಿಪಿ ಸರ್ಕಾರವು ಪಾವಿತ್ರ್ಯತೆಯನ್ನು ಖಚಿತಪಡಿಸಿಕೊಳ್ಳಲು ಸುಧಾರಣೆಗಳನ್ನು ಕೈಗೊಂಡಿದೆ ಎಂದು ಅವರು ಹೇಳಿದರು.
ತುಪ್ಪ ಸೇರಿದಂತೆ ಪ್ರಸಾದದ ಪದಾರ್ಥಗಳ ಪರಿಶೀಲನೆ ಕುರಿತು ಕಟ್ಟೆಚ್ಚರ ವಹಿಸಲಾಗಿದೆ: TTD
ತಿರುಮಲ ತಿರುಪತಿ ದೇವಸ್ಥಾನದ (ಟಿಟಿಡಿ) ಕಾರ್ಯನಿರ್ವಹಣಾಧಿಕಾರಿ ಶಾಮಲಾ ರಾವ್ ಮಾತನಾಡಿ, ‘ತಾವು ಟಿಟಿಡಿ ಕಾರ್ಯನಿರ್ವಹಣಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡಾಗಿನಿಂದಲೇ ತುಪ್ಪವನ್ನು ಖರೀದಿಸಿ, ಪ್ರಸಾದವಾಗಿ ನೀಡುವ ಲಡ್ಡುವಿನ ಗುಣಮಟ್ಟದ ಬಗ್ಗೆ ಸಿಎಂ ಕಳವಳ ವ್ಯಕ್ತಪಡಿಸಿದ್ದರು. ಈಗ ತುಪ್ಪ ಸೇರಿದಂತೆ ಪ್ರಸಾದದ ಪದಾರ್ಥಗಳ ಪರಿಶೀಲನೆ ಕುರಿತು ಕಟ್ಟೆಚ್ಚರ ವಹಿಸಲಾಗಿದೆ. ಶುದ್ಧ ಹಸುವಿನ ಹಾಲು ತುಪ್ಪವನ್ನು ಪಡೆಯುವುದು ಸೇರಿದಂತೆ ನಾನು ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ಸಿಎಂ ನಾಯ್ಡು ಬಯಸಿದ್ದರು. ಅವರ ಆದೇಶದಂತೆ ಕಟ್ಟುನಿಟ್ಟಾಗಿ ಅದರ ಕುರಿತು ಕೆಲಸ ಮಾಡುತ್ತಿದ್ದೇವೆ.
ತುಪ್ಪದಲ್ಲಿ ಕಲಬೆರಕೆ ಪರೀಕ್ಷಿಸಲು ನಮ್ಮಲ್ಲಿ ಯಾವುದೇ ಆಂತರಿಕ ಲ್ಯಾಬ್ ಇಲ್ಲ ಎಂದು ನಾವು ಕಂಡುಕೊಂಡಿದ್ದೇವೆ. ಹೊರಗಿನ ಲ್ಯಾಬ್‌ಗಳಲ್ಲಿ ತುಪ್ಪದ ಗುಣಮಟ್ಟವನ್ನು ಪರಿಶೀಲಿಸುವ ಯಾವುದೇ ವ್ಯವಸ್ಥೆ ಇಲ್ಲ. ಟೆಂಡರ್‌ದಾರರು ಉಲ್ಲೇಖಿಸಿದ ದರಗಳು ಅಸಮರ್ಥವಾಗಿವೆ. ಶುದ್ಧ ಹಸುವಿನ ತುಪ್ಪಕ್ಕೆ ಇಷ್ಟು ಕಡಿಮೆ ಬೆಲೆ ಇಲ್ಲ ಎಂದು ಯಾರಾದರೂ ಹೇಳಬಹುದಾದಷ್ಟು ಕಡಿಮೆ ದರದಲ್ಲಿ ತುಪ್ಪ ಖರೀದಿ ಮಾಡಲಾಗುತ್ತಿತ್ತು. ಈಗ ನಾವು ಎಲ್ಲಾ ಪೂರೈಕೆದಾರರಿಗೆ ಎಚ್ಚರಿಕೆ ನೀಡಿದ್ದೇವೆ.
ಸರಬರಾಜು ಮಾಡಿದ ತುಪ್ಪವು ಲ್ಯಾಬ್ ಪರೀಕ್ಷೆಯಲ್ಲಿ ಉತ್ತೀರ್ಣವಾಗದಿದ್ದ ಅಂತರ ಪೂರೈಕೆದಾರರನ್ನು ಕಪ್ಪು ಪಟ್ಟಿಗೆ ಸೇರಿಸಲಾಗುವುದು. ಈ ಹಿಂದೆ ನಾವು ಎಲ್ಲಾ ಮಾದರಿಯ ತುಪ್ಪವನ್ನು ಸಂಗ್ರಹಿಸಿ ದೇಶದ ಅತ್ಯುತ್ತಮ ಲ್ಯಾಬ್ ಗೆ ಕಳುಹಿಸಿದ್ದೇವು. ಇದು ಸರ್ಕಾರಿ ಯಂತ್ರಿತ ಲ್ಯಾಬ್ ಆಗಿದ್ದು ಅದರಿಂದ ಬಂದ ವರದಿ ಆಘಾತಕಾರಿಯಾಗಿತ್ತು. ತುಪ್ಪ ಕಲಬೆರಕೆಯಾಗಿತ್ತು. ಹೀಗಾಗಿ ಪೂರೈಕೆದಾರರನ್ನು ಬದಲಿಸಿದೆವು ಎಂದು ಹೇಳಿದ್ದಾರೆ.
Advertisement