ತಿರುವನಂತಪುರ: 2017ರ ಕೇರಳದಲ್ಲಿ ನಟಿಯ ಅಪಹರಣ ಮತ್ತು ಅತ್ಯಾಚಾರ ಪ್ರಕರಣದ ವಿಚಾರಣೆ ಆಮೆಗತಿಯಲ್ಲಿ ಸಾಗುತ್ತಿರುವುದನ್ನು ಮತ್ತು ಪ್ರಮುಖ ಆರೋಪಿ ಸುನಿಲ್ ಎಸ್. ಅಲಿಯಾಸ್ ಪಲ್ಸರ್ ಸುನಿ ಕಳೆದ ಏಳು ವರ್ಷಗಳಿಂದಲೂ ಜೈಲಿನಲ್ಲಿರುವುದನ್ನು ಪರಿಗಣಿಸಿ ಸರ್ವೋಚ್ಚ ನ್ಯಾಯಾಲಯವು ಮಂಗಳವಾರ ಆತನಿಗೆ ಜಾಮೀನು ಮಂಜೂರು ಮಾಡಿದೆ.
ಪ್ರಕರಣದಲ್ಲಿ ಜಾಮೀನು ಕೋರಿ ಪಲ್ಸರ್ ಸುನಿ ಅರ್ಜಿ ಸಲ್ಲಿಸಿದ ಬಳಿಕ ನ್ಯಾಯಮೂರ್ತಿಗಳಾದ ಎ.ಎಸ್.ಓಕಾ ಮತ್ತು ಪಂಕಜ ಮಿತ್ತಲ್ ಅವರ ಪೀಠವು ರಾಜ್ಯ ಸರಕಾರದಿಂದ ವರದಿಯನ್ನು ಕೇಳಿತ್ತು. ಈ ವರ್ಷದ ಜೂ.6ರಂದು ಕೇರಳ ಉಚ್ಚ ನ್ಯಾಯಾಲಯವು ತನ್ನ ಜಾಮೀನು ಅರ್ಜಿಯನ್ನು ತಿರಸ್ಕರಿಸಿದ ಬಳಿಕ ಸುನಿ ಸರ್ವೋಚ್ಚ ನ್ಯಾಯಾಲಯದ ಮೆಟ್ಟಿಲೇರಿದ್ದ.
ಪ್ರಕರಣದಲ್ಲಿಯ ಇತರ ಎಲ್ಲ ಆರೋಪಿಗಳು ಜಾಮೀನು ಬಿಡುಗಡೆಗೊಂಡಿದ್ದರೂ ಸುನಿ ಏಳು ವರ್ಷಗಳಿಗೂ ಅಧಿಕ ಜೈಲುವಾಸವನ್ನು ಅನುಭವಿಸಿದ್ದಾನೆ ಎನ್ನುವುದನ್ನು ಗಮನಕ್ಕೆ ತೆಗೆದುಕೊಂಡ ಸರ್ವೋಚ್ಚ ನ್ಯಾಯಾಲಯವು, ಎರ್ನಾಕುಲಂ ಜಿಲ್ಲಾ ಪ್ರಧಾನ ಸತ್ರ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿರುವ ರೀತಿಯನ್ನು ಟೀಕಿಸಿತು. ಸುನಿಯನ್ನು ಹಾಜರುಪಡಿಸಿದ ನಂತರ, ನ್ಯಾಯಾಲಯವು ಅವರಿಗೆ ಜಾಮೀನು ನೀಡಲು ಹಾಕಬೇಕಾದ ಷರತ್ತುಗಳ ಕುರಿತು ಅವರ ವಕೀಲರು ಮತ್ತು ಪ್ರಾಸಿಕ್ಯೂಷನ್ ವಾದು ಆಲಿಸಿತು. ಆರೋಪಿಗಳು ಸಾಕ್ಷಿಗಳ ಮೇಲೆ ಪ್ರಭಾವ ಬೀರದಂತೆ ಅಥವಾ ಯಾವುದೇ ಸಾಕ್ಷ್ಯವನ್ನು ಹಾಳು ಮಾಡದಂತೆ ಕಟ್ಟುನಿಟ್ಟಿನ ಷರತ್ತುಗಳನ್ನ ವಿಧಿಸಿದೆ.
Advertisement