ಸಿಖ್ಖರ ಬಗ್ಗೆ ಹೇಳಿಕೆ: ಬಿಜೆಪಿಯಿಂದ ಹಸಿ, ಹಸಿ ಸುಳ್ಳು, ಹತಾಶೆಯಿಂದ ನನ್ನ ಬಾಯಿ ಮುಚ್ಚಿಸಲು ಪ್ರಯತ್ನ- ರಾಹುಲ್ ಗಾಂಧಿ
ನವದೆಹಲಿ: ಇತ್ತೀಚಿನ ಅಮೆರಿಕ ಪ್ರವಾಸದ ವೇಳೆಯಲ್ಲಿ ನೀಡಲಾದ ಹೇಳಿಕೆ ಕುರಿತು ಬಿಜೆಪಿ ಸುಳ್ಳು ಹರಡುತ್ತಿದೆ ಎಂದು ಶನಿವಾರ ಆರೋಪಿಸಿದ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ, ನಾನು ಹೇಳಿದ್ದರಲ್ಲಿ ಏನಾದರೂ ತಪ್ಪು ಇದೆಯೇ ಎಂದು ಸಿಖ್ಖರನ್ನು ಪ್ರಶ್ನಿಸಿದ್ದಾರೆ. ಪ್ರತಿಯೊಬ್ಬ ಭಾರತೀಯರು ಯಾವುದೇ ಭಯವಿಲ್ಲದೆ ತಮ್ಮ ಧರ್ಮವನ್ನು ಅನುಸರಿಸಲು ಸಾಧ್ಯವಾಗುವ ದೇಶ ಭಾರತವಾಗಬೇಕಲ್ಲವೇ ಎಂದು ಕೇಳಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಫೋಸ್ಟ್ ಮಾಡಿರುವ ರಾಹುಲ್ ಗಾಂಧಿ, ಸತ್ಯವನ್ನು ಸಹಿಸದ ಬಿಜೆಪಿ ನನ್ನ ಬಾಯಿ ಮುಚ್ಚಿಸಲು ಪ್ರಯತ್ನಿಸುತ್ತಿದೆ. ಅಮೆರಿಕದಲ್ಲಿನ ನನ್ನ ಹೇಳಿಕೆ ಕುರಿತು ಸುಳ್ಳು ಹರಡುತ್ತಿದೆ. ನಾನು ಹೇಳಿದ್ದರಲ್ಲಿ ಏನಾದರೂ ತಪ್ಪು ಇದೆಯೇ? ಎಂದು ದೇಶ ಹಾಗೂ ವಿದೇಶಗಳಲ್ಲಿ ನೆಲೆಸಿರುವ ಸಿಖ್ ಸಮುದಾಯದ ಸಹೋದರರು ಹಾಗೂ ಸಹೋದರಿಯರನ್ನು ಕೇಳುತ್ತೇನೆ. ಬಿಜೆಪಿ ಎಂದಿನಿಂತ ಸುಳ್ಳಿನ ಮೊರೆ ಹೋಗುವುದನ್ನು ರೂಢಿಸಿಕೊಂಡಿದ್ದು, ನಾನು ಎಂದಿಗೂ ಭಾರತವನ್ನು ವ್ಯಾಖ್ಯಾನಿಸುವ ವಿವಿಧತೆಯಲ್ಲಿ ಏಕತೆ, ಸಮಾನತೆ ಮತ್ತು ಪ್ರೀತಿಯ ಮೌಲ್ಯಗಳ ಪರ ಮಾತನಾಡುತ್ತೇನೆ ಎಂದಿದ್ದಾರೆ. ಅಲ್ಲದೇ, ಅಮೆರಿಕದಲ್ಲಿ ಮಾತನಾಡಿರುವ ಹೇಳಿಕೆ ಕಿರು ವಿಡಿಯೋವೊಂದನ್ನು ಅವರು ಹಂಚಿಕೊಂಡಿದ್ದಾರೆ.
ದೇಶದಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದೆ ಎಂಬ ರಾಹುಲ್ ಗಾಂಧಿ ಹೇಳಿಕೆಯನ್ನು ಹಿಂಪಡೆಯುವಂತೆ ಬಿಜೆಪಿಯು ಹಲವಾರು ಸಿಖ್ ಗುಂಪುಗ ಹೇಳಿಕೆಯನ್ನು ಶನಿವಾರ ಬಿಜೆಪಿ ಉಲ್ಲೇಖಿಸಿದ ನಂತರ ರಾಹುಲ್ ಗಾಂಧಿ ಈ ರೀತಿಯ ಹೇಳಿಕೆ ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಬಿಜೆಪಿ ನಾಯಕ ಮಂಜಿಂದರ್ ಸಿಂಗ್ ಸಿರ್ಸಾ, ಈ ವಿಚಾರದಲ್ಲಿ ಹಲವಾರು ಸಿಖ್ ಮತ್ತು ಗುರುದ್ವಾರ ನಿರ್ವಹಣಾ ಸಂಸ್ಥೆಗಳು ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ನಿತ್ಯಾನಂದ ರೈ ಅವರನ್ನು ಭೇಟಿಯಾಗಿದ್ದು. ದೇಶಕ್ಕಾಗಿ ಸಿಖ್ಖರ ತ್ಯಾಗ, ಬಲಿದಾನ ದೇಶವನ್ನು ಬಲಿಷ್ಟಗೊಳಿಸಿದೆ ಎಂದು ಹೇಳಿರುವುದಾಗಿ ಅವರು ಪ್ರತಿಪಾದಿಸಿದರು.