ಇಂದೋರ್: ದ್ವಿಚಕ್ರವಾಹನದಲ್ಲಿ ಪತಿಯೊಂದಿಗೆ ತೆರಳುತ್ತಿದ್ದ ಮಹಿಳೆಯೊಬ್ಬರು ರಸ್ತೆ ಅಪಘಾತಕ್ಕೀಡಾಗಿದ್ದು, ಕೋಮಾಗೆ ಜಾರಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.
ಬಸ್ ರಾಪಿಡ್ ಟ್ರಾನ್ಸಿಟ್ ಸಿಸ್ಟಮ್ (BRTS) ರಸ್ತೆಯಲ್ಲಿ ನಡೆದ ಅಪಘಾತಕ್ಕೆ ರಸ್ತೆ ಹೊಂಡ ಕಾರಣವಾಗಿದ್ದು, ಘಟನೆ ನಡೆಯುತ್ತಿದ್ದಂತೆಯೇ ಪೊಲೀಸರು ಮಹಿಳೆಯ ಪತಿ ವಿರುದ್ಧ ಮಿತಿ ಮೀರಿದ ವೇಗದಿಂದ ವಾಹನ ಚಾಲನೆ ಮಾಡಿದ್ದಕ್ಕಾಗಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಅಪಘಾತಕ್ಕೀಡಾದ ಮಹಿಳೆಯ ಪತಿ ವಿರುದ್ಧ ಕ್ರಮವನ್ನು ಪ್ರಶ್ನಿಸಿದಾಗ ಪ್ರತಿಕ್ರಿಯೆ ನೀಡಿರುವ ಪೊಲೀಸ್ ಅಧಿಕಾರಿಗಳು, ಅಪಘಾತ ಸಂಭವಿಸಿದ ಬಿಆರ್‌ಟಿಎಸ್ ರಸ್ತೆಯ ನಿರ್ವಹಣೆಯ ಜವಾಬ್ದಾರಿ ಯಾವ ಏಜೆನ್ಸಿಗೆ ಇದೆ ಎಂದು ಕೇಳಿ ನಗರ ಪಾಲಿಕೆಗೆ ಪತ್ರ ಬರೆಯುವುದಾಗಿ ತಿಳಿಸಿದ್ದಾರೆ.
ಶಾನು ಗೌರ್ ಹಿಂಬದಿ ಕುಳಿತು ಸವಾರಿ ಮಾಡುತ್ತಿದ್ದ ಸ್ಕೂಟರ್ ನಗರದ ಎಂಐಜಿ ಪ್ರದೇಶದಲ್ಲಿ ದೊಡ್ಡ ಗುಂಡಿಗೆ ಬಿದ್ದಿದ್ದರಿಂದ ತಲೆಗೆ ಗಾಯವಾಗಿದೆ. ಅಪಘಾತದ ಸಮಯದಲ್ಲಿ ಅವರ ಪತಿ ರವಿ ಗೌರ್ ದ್ವಿಚಕ್ರ ವಾಹನವನ್ನು ಚಲಾಯಿಸುತ್ತಿದ್ದರು ಎಂದು ಅಧಿಕಾರಿ ತಿಳಿಸಿದ್ದಾರೆ.
ಗಂಭೀರವಾಗಿ ಗಾಯಗೊಂಡ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ನಂತರ ಆಕೆ ಕೋಮಾ ಸ್ಥಿತಿಗೆ ಜಾರಿದಳು ಎಂದು ಅವರು ಹೇಳಿದರು.
ರವಿ ಗೌರ್ ಅವರ ವಿರುದ್ಧ ಭಾರತೀಯ ನ್ಯಾಯ ಸಂಹಿತಾ ಸೆಕ್ಷನ್ 125 (ಇತರರ ಜೀವ ಅಥವಾ ವೈಯಕ್ತಿಕ ಸುರಕ್ಷತೆಗೆ ಅಪಾಯವನ್ನುಂಟುಮಾಡುವ ಕಾಯ್ದೆ) ಮತ್ತು 281 (ಅತಿ ವೇಗದ ಚಾಲನೆ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
Advertisement