
ವಿಜಯವಾಡ: ಹಿಂದೂ ಧರ್ಮದ ಪಾವಿತ್ರ್ಯತೆ ಮತ್ತು ಆಹಾರ ಕಲಬೆರಕೆಯಂತಹ ವಿಷಯಗಳ ಬಗ್ಗೆ ನಾನು ಖಂಡಿತಾ ಮಾತನಾಡುತ್ತೇನೆ. ಜಾತ್ಯತೀತತೆಯ ವಿಷಯ ಬಂದಾಗ ಅದು ಪರಸ್ಪರ ಇರಬೇಕು ಎಂದು ಆಂಧ್ರ ಪ್ರದೇಶ ಉಪ ಮುಖ್ಯಮಂತ್ರಿ ಪವನ್ ಕಲ್ಯಾಣ್ ನಟ ಪ್ರಕಾಶ್ ರೈ ಗೆ ತಿರುಗೇಟು ನೀಡಿದ್ದಾರೆ.
ಹಿಂದೂಗಳ ಖ್ಯಾತ ಪವಿತ್ರ ಯಾತ್ರಾತಾಣ ತಿರುಮಲ ದೇಗುಲದಲ್ಲಿನ ಲಡ್ಡು ಪ್ರಸಾದದಲ್ಲಿ ಪ್ರಾಣಿಗಳ ಕೊಬ್ಬು ಮಿಶ್ರಣವಾಗಿರುವುದರ ಕುರಿತು ಈ ಹಿಂದೆ ಪ್ರತಿಕ್ರಿಯೆ ನೀಡಿದ್ದ ಪವನ್ ಕಲ್ಯಾಣ್, ರಾಷ್ಟ್ರ ಮಟ್ಟದಲ್ಲಿ ‘ಸನಾತನ ಧರ್ಮ ರಕ್ಷಣಾ ಮಂಡಳಿ’ಯನ್ನು ಸ್ಥಾಪಿಸುವ ಸಮಯ ಬಂದಿದೆ ಎಂದು ಹೇಳಿದ್ದರು.
'ತಿರುಪತಿ ಬಾಲಾಜಿ ಪ್ರಸಾದದಲ್ಲಿ ಬೆರೆತಿರುವ ಪ್ರಾಣಿಗಳ ಕೊಬ್ಬನ್ನು (ಮೀನಿನ ಎಣ್ಣೆ, ಹಂದಿಯ ಕೊಬ್ಬು ಮತ್ತು ಗೋಮಾಂಸದ ಕೊಬ್ಬು) ಕಂಡುಹಿಡಿದಿರುವುದರಿಂದ ನಾವೆಲ್ಲರೂ ತೀವ್ರವಾಗಿ ವಿಚಲಿತರಾಗಿದ್ದೇವೆ. ವೈಸಿಪಿ ಸರ್ಕಾರ ರಚಿಸಿದ್ದ ಟಿಟಿಡಿ ಮಂಡಳಿಯು ಹಲವು ಪ್ರಶ್ನೆಗಳಿಗೆ ಉತ್ತರಿಸಬೇಕಾಗಿದೆ. ಸಾಧ್ಯವಾದಷ್ಟು ಕಠಿಣ ಕ್ರಮ ಕೈಗೊಳ್ಳಲು ನಮ್ಮ ಸರ್ಕಾರ ಬದ್ಧವಾಗಿದೆ. ಆದರೆ, ಇದು ದೇವಾಲಯಗಳ ಅಪವಿತ್ರತೆ, ಅದರ ಭೂಮಿ ಸಮಸ್ಯೆಗಳು ಮತ್ತು ಇತರ ಧಾರ್ವಿುಕ ಆಚರಣೆಗಳ ಸುತ್ತಲಿನ ಅನೇಕ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುತ್ತದೆ.
ಇಡೀ ಭಾರತದಲ್ಲಿರುವ ದೇವಾಲಯಗಳಿಗೆ ಸಂಬಂಧಿಸಿದ ಎಲ್ಲಾ ಸಮಸ್ಯೆಗಳನ್ನು ಪರಿಶೀಲಿಸಲು ರಾಷ್ಟ್ರ ಮಟ್ಟದಲ್ಲಿ ‘ಸನಾತನ ಧರ್ಮ ರಕ್ಷಣಾ ಮಂಡಳಿ’ಯನ್ನು ಸ್ಥಾಪಿಸುವ ಸಮಯ ಬಂದಿದೆ. ರಾಷ್ಟ್ರೀಯ ಮಟ್ಟದಲ್ಲಿ ಎಲ್ಲಾ ನೀತಿ ನಿರೂಪಕರು, ಧಾರ್ಮಿಕ ಮುಖ್ಯಸ್ಥರು, ನ್ಯಾಯಾಂಗ, ನಾಗರಿಕರು, ಮಾಧ್ಯಮಗಳಲ್ಲಿ ಮತ್ತು ಅವರವರ ಕ್ಷೇತ್ರಗಳಲ್ಲಿ ಚರ್ಚೆ ನಡೆಯಬೇಕು. ‘ಸನಾತನ ಧರ್ಮ’ವನ್ನು ಯಾವುದೇ ರೂಪದಲ್ಲಿ ಅಪವಿತ್ರಗೊಳಿಸುವುದನ್ನು ಕೊನೆಗೊಳಿಸಲು ನಾವೆಲ್ಲರೂ ಒಗ್ಗೂಡಬೇಕು ಎಂದು ನಾನು ಭಾವಿಸುತ್ತೇನೆ ಎಂದು ಹೇಳಿದ್ದರು.
ಇದಕ್ಕೆ ಎಕ್ಸ್ ನಲ್ಲಿ ಪ್ರತಿಕ್ರಿಯೆ ನೀಡಿದ್ದ ಪ್ರಕಾಶ್ ರೈ, ಪವನ್ ಕಲ್ಯಾಣ್ ಅವರೇ ನೀವು ಡಿಸಿಎಂ ಆಗಿರುವ ರಾಜ್ಯದಲ್ಲೇ ಇದು ನಡೆದಿದೆ. ದಯವಿಟ್ಟು ತನಿಖೆ ಮಾಡಿ .. ತಪ್ಪಿತಸ್ಥರನ್ನು ಪತ್ತೆ ಮಾಡಿ ಮತ್ತು ಕಠಿಣ ಕ್ರಮ ಕೈಗೊಳ್ಳಿ. ನೀವು ಏಕೆ ಆತಂಕಗಳನ್ನು ಹರಡುತ್ತಿದ್ದೀರಿ ಮತ್ತು ಸಮಸ್ಯೆಯನ್ನು ರಾಷ್ಟ್ರೀಯವಾಗಿ ಸ್ಫೋಟಿಸುತ್ತಿದ್ದೀರಿ. ನಮಗೆ ದೇಶದಲ್ಲಿ ಈಗಾಗಲೇ ಸಾಕಷ್ಟು ಕೋಮು ಉದ್ವಿಗ್ನತೆಗಳಿವೆ. ಇದಕ್ಕೆ ಕೇಂದ್ರದಲ್ಲಿರುವ ನಿಮ್ಮ ಸ್ನೇಹಿತರಿಗೆ ಧನ್ಯವಾದಗಳು... #justasking ಎಂದು ಪೋಸ್ಟ್ ಮಾಡಿದ್ದರು.
ಈ ಪೋಸ್ಟ್ ಗೆ ಇಂದು ಮಾಧ್ಯಮಗಳ ಮೂಲಕ ಪ್ರತಿಕ್ರಿಯೆ ನೀಡಿರುವ ಪವನ್ ಕಲ್ಯಾಣ್, 'ಪ್ರಕಾಶ್ ರಾಜ್ ಅವರನ್ನು ನಾನು ಗೌರವಿಸುತ್ತೇನೆ.. ಅಂತೆಯೇ ಜಾತ್ಯತೀತತೆಯ ವಿಷಯ ಬಂದಾಗ ಅದು ಪರಸ್ಪರ ಇರಬೇಕು ಎಂದು ಭಾವಿಸುತ್ತೇನೆ. ನಾನು ಹಿಂದೂ ಧರ್ಮದ ಪಾವಿತ್ರ್ಯತೆ ಮತ್ತು ಆಹಾರ ಕಲಬೆರಕೆಯಂತಹ ವಿಷಯಗಳ ಬಗ್ಗೆ ಮಾತನಾಡುತ್ತಿದ್ದೇನೆ, ನಾನು ಈ ವಿಷಯಗಳ ಬಗ್ಗೆ ಏಕೆ ಮಾತನಾಡಬಾರದು? ಎಂದು ಪ್ರಶ್ನಿಸಿದ್ದಾರೆ.
ಅಲ್ಲದೆ, ಸನಾತನ ಧರ್ಮದ ಮೇಲಿನ ದಾಳಿಯ ವಿರುದ್ಧ ನಾನು ಏಕೆ ಮಾತನಾಡಬಾರದು ಎಂದು ನನಗೆ ಅರ್ಥವಾಗುತ್ತಿಲ್ಲ. ಟೀಕಾಕಾರರು ಅಯ್ಯಪ್ಪ ಮತ್ತು ಸರಸ್ವತಿ ದೇವಿಯನ್ನು ಗುರಿಯಾಗಿಸಿಕೊಂಡಿದ್ದಾರೆ. ಈ ವಿಷಯದಲ್ಲಿ ಪ್ರತಿಯೊಬ್ಬ ಹಿಂದುವೂ ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕು, ಧರ್ಮದ ವಿಚಾರ ಬಂದಾಗ ಇತರ ಧರ್ಮಗಳಲ್ಲಿಯೂ ಸಹ ಇಂತಹ ವ್ಯಾಪಕವಾದ ಆಂದೋಲನಗಳು ನಡೆಯುತ್ತವೆ ಎಂದು ಪವನ್ ಕಲ್ಯಾಣ್ ಹೇಳಿದರು.
Advertisement