ಶಹಜಹಾನ್ ಪುರ: ಕಟ್ಟಡ ನಿರ್ಮಾಣ ಕಾರ್ಮಿಕ ಹಾಗೂ ಆತನ ಸಹಚರ ಗನ್ ತೋರಿಸಿ ಬೆದರಿಕೆ ಹಾಕಿ ನರ್ಸಿಂಗ್ ವಿದ್ಯಾರ್ಥಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಘಟನೆ ಉತ್ತರ ಪ್ರದೇಶದ ಶಹಜಹಾನ್‌ಪುರದಲ್ಲಿ ನಡೆದಿದೆ.
ಓರ್ವ ಆರೋಪಿ ಬಂಧನಕ್ಕೆ ಒಳಗಾಗಿದ್ದರೆ, ಮತ್ತೋರ್ವನ ಬಂಧನಕ್ಕೆ ಕಾರ್ಯಾಚರಣೆ ನಡೆಸಲಾಗುತ್ತಿದೆ.
ಜಲಾಲಾಬಾದ್ ಪೊಲೀಸ್ ಠಾಣಾ ವ್ಯಾಪ್ತಿಯ ನಿವಾಸಿಯಾಗಿರುವ ವಿದ್ಯಾರ್ಥಿಯು ಚೌಕ್ ಕೊತ್ವಾಲಿ ಪ್ರದೇಶದಲ್ಲಿರುವ ಕಾಲೇಜಿನಲ್ಲಿ ನರ್ಸಿಂಗ್ ಕೋರ್ಸ್ ವ್ಯಾಸಂಗ ಮಾಡುತ್ತಿದ್ದಾರೆ ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ (ಎಎಸ್‌ಪಿ) ಸಂಜಯ್ ಕುಮಾರ್ ತಿಳಿಸಿದ್ದಾರೆ. ಸೋಮವಾರ ಟೈಲ್ ಗುತ್ತಿಗೆದಾರ ಸುರೇಶ್ ಕುಮಾರ್ (35) ಮತ್ತು ಅವರ ಪಾಲುದಾರ ಅನ್ಮೋಲ್ ಕಾಲೇಜಿನ ವಾಶ್ ರೂಂನಲ್ಲಿ ವಿದ್ಯಾರ್ಥಿನಿಯನ್ನು ಹಿಡಿದು ಕಿರುಕುಳ ನೀಡಿದ್ದಾರೆ ಎಂದು ಅವರು ಹೇಳಿದ್ದಾರೆ.
ವಿದ್ಯಾರ್ಥಿನಿ ಕೂಗಾಡಲು ಮುಂದಾದಾಗ ಸುರೇಶ್ ಆಕೆಯ ಬಾಯಿ ಬಿಗಿದು ಬಂದೂಕನ್ನು ತೋರಿಸಿದ,'' ಎಂದು ಹೇಳಿದ ಸಂಜಯ್ ಕುಮಾರ್, ''ಆದರೂ ಧೈರ್ಯ ತೋರಿದ ವಿದ್ಯಾರ್ಥಿನಿ ಆರೋಪಿಯ ಕೈ ಕಚ್ಚಿ ಕಿರುಚಾಡುತ್ತಾ ಬಾತ್ ರೂಂನಿಂದ ಹೊರಗೆ ಓಡಿಹೋದಳು ಎಂದು ತಿಳಿಸಿದ್ದಾರೆ.
ಬಾಲಕಿಯ ಕಿರುಚಾಟ ಕೇಳಿ ನರ್ಸಿಂಗ್ ಕಾಲೇಜು ಸಿಬ್ಬಂದಿ ಹಾಗೂ ಇತರೆ ವಿದ್ಯಾರ್ಥಿಗಳು ಸ್ಥಳಕ್ಕೆ ಧಾವಿಸಿದ್ದಾರೆ. ಅವರನ್ನು ನೋಡಿದ ಇಬ್ಬರೂ ಓಡಿಹೋಗಲು ಪ್ರಾರಂಭಿಸಿದರು, ಆದರೆ ಸುರೇಶ್ ಸಿಕ್ಕಿಬಿದ್ದಿದ್ದಾನೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಕೊಲೆ ಯತ್ನ ಮತ್ತು ಕಿರುಕುಳಕ್ಕೆ ಸಂಬಂಧಿಸಿದ ಸಂಬಂಧಿತ ಭಾರತೀಯ ನ್ಯಾಯ ಸಂಹಿತಾ ಸೆಕ್ಷನ್‌ಗಳ ಅಡಿಯಲ್ಲಿ ಇಬ್ಬರೂ ಆರೋಪಿಗಳ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಳ್ಳಲಾಗುತ್ತಿದ್ದು, ಅನ್ಮೋಲ್ ಗಾಗಿ ಶೋಧ ನಡೆಸುತ್ತಿದ್ದೇವೆ ಎಂದು ಎಎಸ್ಪಿ ಕುಮಾರ್ ತಿಳಿಸಿದ್ದಾರೆ.
Advertisement