
ಝಾನ್ಸಿ: ಉತ್ತರ ಪ್ರದೇಶದ ಝಾನ್ಸಿಯಲ್ಲಿ ಸೈಕಲ್ ಮೇಲೆ ಹೋಗುತ್ತಿದ್ದ ವೃದ್ಧರೊಬ್ಬರ ಮುಖಕ್ಕೆ ಸ್ನೋ ಸ್ಪ್ರೇ ಮಾಡುವ ಮೂಲಕ ವಿಕೃತಿ ಮೆರೆದಿದ್ದ ಆರೋಪಿಗೆ ಪೊಲೀಸರು ತಕ್ಕ ಶಾಸ್ತಿ ಮಾಡಿದ್ದಾರೆ.
ಯುವಕನ ಈ ಕೃತ್ಯ ಮುದುಕನ ಪ್ರಾಣಕ್ಕೆ ಕುತ್ತು ತಂದೊಟ್ಟಿತ್ತು. ಈ ಘಟನೆಯಲ್ಲಿ ಯಾವುದೇ ಅವಘಡ ಸಂಭವಿಸದಿರುವುದು ಸಮಾಧಾನದ ಸಂಗತಿ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಅಲ್ಲದೆ ಯುವಕನ ಈ ಕೃತ್ಯದ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತವಾಗಿತ್ತು. ಈ ವಿಡಿಯೋದಲ್ಲಿನ ಆರೋಪಿಯನ್ನು ಗುರುತಿಸಿದ ಪೊಲೀಸರು ಠಾಣೆಗೆ ಕರೆತಂದು ಲಾಠಿ ರುಚಿ ತೋರಿಸಿದ್ದಾರೆ.
ವಾಸ್ತವವಾಗಿ, ಎರಡು ವೀಡಿಯೊಗಳನ್ನು ಒಂದರ ನಂತರ ಒಂದರಂತೆ ಪೋಸ್ಟ್ ಮಾಡಲಾಗಿದೆ. ಒಂದರಲ್ಲಿ ಹಿಂಬದಿಯಿಂದ ಬೈಕ್ ನಲ್ಲಿ ಬಂದ ಯುವಕರು ಸೈಕಲ್ ಮೇಲೆ ಹೋಗುತ್ತಿದ್ದ ಮುದುಕನ ಮುಖಕ್ಕೆ ಸ್ಪ್ರೇ ಸಿಂಪಡಿಸುತ್ತಾರೆ. ಇದರಿಂದ ಮುದುಕನ ಮುಖ ಪೂರ್ತಿ ನೊರೆ ಆವರಿಸಿ ಆತಂಕಕ್ಕೆ ಒಳಗಾಗುತ್ತಾರೆ. ರಸ್ತೆ ಸಂಚಾರದ ಮಧ್ಯೆ ಮಾಡಿದ ಈ ಕೃತ್ಯದಿಂದ ವೃದ್ಧನಿಗೆ ವಾಹನ ಡಿಕ್ಕಿ ಹೊಡೆದು ಗಾಯಗೊಳ್ಳುವ ಸಂಭವವಿತ್ತು. ಆದರೆ ತನ್ನ ಕೃತ್ಯದಿಂದ ಸೈಕಲ್ ತುಳಿಯುತ್ತಿದ್ದ ವೃದ್ಧನಿಗೆ ಆಗುವ ತೊಂದರೆ ಬಗ್ಗೆ ತಲೆ ಕೆಡಿಸಿಕೊಳ್ಳದ ಯುವಕರು ಮುಂದೆ ಹೋಗುತ್ತಾರೆ. ಅಷ್ಟೇ ಅಲ್ಲದೆ ನಾಚಿಕೆಯಿಲ್ಲದೆ ನಗುತ್ತಾರೆ.
ನವಾಬಾದ್ ಪೊಲೀಸ್ ಠಾಣೆ ವ್ಯಾಪ್ತಿಯ ಎಲೈಟ್-ಚಿತ್ರಾ ರಸ್ತೆಯಲ್ಲಿರುವ ಫ್ಲೈಓವರ್ ಬಳಿ ಯುವಕ ಈ ಕೃತ್ಯ ಎಸಗಿದ್ದಾನೆ. ರೀಲ್ ಗೆ ಸಂಬಂಧಿಸಿದಂತೆ ಈ ಯುವಕ ಈ ಹಿಂದೆಯೂ ಇಂತಹ ಕೆಲಸಗಳನ್ನು ಮಾಡಿದ್ದಾನೆ ಎಂದು ಹೇಳಲಾಗಿದೆ. ವಿಡಿಯೋ ವೈರಲ್ ಆಗುತ್ತಿರುವುದನ್ನು ಪೊಲೀಸರು ಗಮನಕ್ಕೆ ತಂದಿದ್ದಾರೆ. ಇದಾದ ಬಳಿಕ ನವಾಬಾದ್ ಮತ್ತು ಸಿಪ್ರಿ ಬಜಾರ್ ಠಾಣೆ ಪೊಲೀಸರು ಆರೋಪಿಯನ್ನು ಹಿಡಿದು ಸೂಕ್ತ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
Advertisement