
ಭುವನೇಶ್ವರ: ತಿರುಪತಿ-ತಿರುಮಲದ ಶ್ರೀ ವೆಂಕಟೇಶ್ವರ ಸ್ವಾಮಿ ದೇಗುಲದಲ್ಲಿನ್ನ ಲಡ್ಡು ಕಲಬೆರಕಿ ವಿವಾದದ ಬೆನ್ನಲ್ಲೇ ಇದೀಗ ಒಡಿಶಾದ ಪುರಿಯ ಜಗನ್ನಾಥ ದೇವಸ್ಥಾನದಲ್ಲಿ ಪ್ರಸಾದಕ್ಕೆ ಬಳಸಲಾಗುವ ತುಪ್ಪದ ಪರೀಕ್ಷೆ ನಡೆಸಲಾಗುತ್ತಿದೆ.
ಹೌದು.. ಪುರಿಯ ಜಗನ್ನಾಥ ದೇವಸ್ಥಾನದಲ್ಲಿ ನೈವೇದ್ಯ ತಯಾರಿಸಲು ಬಳಸುವ ತುಪ್ಪದ ಗುಣಮಟ್ಟವನ್ನು ಪರೀಕ್ಷಿಸಲು ಒಡಿಶಾ ಸರ್ಕಾರ ಮಂಗಳವಾರ ನಿರ್ಧರಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆಂಧ್ರಪ್ರದೇಶದ ತಿರುಮಲ ದೇವಸ್ಥಾನದಲ್ಲಿ ನೀಡುವ ಲಡ್ಡುಗಳನ್ನು ತಯಾರಿಸುವ ತುಪ್ಪದಲ್ಲಿ ಪ್ರಾಣಿಗಳ ಕೊಬ್ಬನ್ನು ಬಳಸಲಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಒಡಿಶಾ ಸರ್ಕಾರ ಈ ನಿರ್ಧಾರ ತೆಗೆದುಕೊಂಡಿದೆ.
ಈ ಬಗ್ಗೆ ಮಾತನಾಡಿದ ಪುರಿಯ ಜಿಲ್ಲಾಧಿಕಾರಿ ಸಿದ್ಧಾರ್ಥ್ ಶಂಕರ್ ಸ್ವೈನ್ ಅವರು, ಜಗನ್ನಾಥ ದೇಗುಲದಲ್ಲಿ ಕಲಬೆರಕೆಯಂತಹ ಯಾವುದೇ ಆರೋಪಗಳಿಲ್ಲ. ಅದಾಗ್ಯೂ ಆಡಳಿತ ಮಂಡಳಿಯು 'ಕೋತ ಭೋಗ' (ದೇವತೆಗಳಿಗೆ ಪ್ರಸಾದ) ಮತ್ತು 'ಬಾರಾಡಿ ಭೋಗ' (ಆದೇಶದ ಮೇರೆಗೆ ಪ್ರಸಾದ) ತಯಾರಿಸಲು ಬಳಸುವ ತುಪ್ಪದ ಗುಣಮಟ್ಟವನ್ನು ಪರೀಕ್ಷಿಸಲು ನಿರ್ಧರಿಸಿದೆ ಎಂದು ಮಾಹಿತಿ ನೀಡಿದರು.
ಅಂತೆಯೇ ಪುರಿ ದೇವಸ್ಥಾನದಲ್ಲಿ ಬಳಕೆಗೆ ತುಪ್ಪದ ಏಕೈಕ ಪೂರೈಕೆದಾರ ಒಡಿಶಾ ಹಾಲು ಒಕ್ಕೂಟ (ಓಂಫೆಡ್)ವಾಗಿದೆ. ಕಲಬೆರಕೆ ಭಯ ಹೋಗಲಾಡಿಸಲು ಓಂಫೆಡ್‌ನಿಂದ ಪೂರೈಕೆಯಾಗುತ್ತಿರುವ ತುಪ್ಪದ ಗುಣಮಟ್ಟವನ್ನು ಪರಿಶೀಲಿಸಲು ನಿರ್ಧರಿಸಲಾಗಿದೆ. ಈ ಸಂಬಂಧ ಓಂಫೆಡ್ ಹಾಗೂ ಪ್ರಸಾದ ತಯಾರಿಸುವ ದೇವಸ್ಥಾನದ ಸೇವಕರೊಂದಿಗೆ ಚರ್ಚೆ ನಡೆಸಲಾಗುವುದು ಎಂದರು.
ಈ ಹಿಂದೆ ಇಲ್ಲಿನ ಸ್ವಯಂ ಸೇವಕರೊಬ್ಬರು ಕಲಬೆರಕೆ ತುಪ್ಪವನ್ನು ದೇವಾಲಯದ ಆವರಣದಲ್ಲಿ ದೀಪಗಳನ್ನು ಉರಿಸಲು ಬಳಸಲಾಗುತ್ತಿತ್ತು ಎಂದು ಆರೋಪಿಸಿದ್ದರು. ಈಗ ಅದನ್ನೂ ಕೂಡ ನಿಲ್ಲಿಸಲಾಗಿದೆ. ಇಲ್ಲಿ ಬಳಸುವ ತುಪ್ಪದ ಸಂಪೂರ್ಣ ಪರೀಕ್ಷೆಗಾಗಿ ನಾವು ದೇವಾಲಯದ ಮುಖ್ಯ ಆಡಳಿತಾಧಿಕಾರಿಗಳಿಗೆ ವಿನಂತಿಸುತ್ತೇವೆ. ಭಕ್ತರ ನಂಬಿಕೆ ಬಹಳ ಮುಖ್ಯವಾಗಿದೆ ಎಂದು ಹೇಳಿದರು.
Advertisement