ರಾಜಸ್ಥಾನ: ಜಮ್ಮು ಮತ್ತು ಕಾಶ್ಮೀರದ ಅನಂತನಾಗ್ ಜಿಲ್ಲೆಯಲ್ಲಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ ಯೋಧ ರಾಮಸ್ವರೂಪ್ ಕಸ್ವಾನ್‌ಗೆ ಹುತಾತ್ಮ ಸ್ಥಾನಮಾನ ನೀಡುವಂತೆ ಒತ್ತಾಯಿಸಿ ಕುಟುಂಬ ಸದಸ್ಯರು ಮತ್ತು ಸ್ಥಳೀಯರು ರಾಜಸ್ಥಾನದ ಬಿಕಾನೇರ್ ಜಿಲ್ಲೆಯಲ್ಲಿ ಗುರುವಾರ ಧರಣಿ ನಡೆಸಿದರು.
ಈ ಕುರಿತು ನ್ಯಾಯಾಲಯದ ವಿಚಾರಣೆ ಬಾಕಿ ಇರುವಾಗಲೇ ಜಿಲ್ಲಾ ಸೈನಿಕ ಕಲ್ಯಾಣಾಧಿಕಾರಿ ಘಟನೆಯನ್ನು ಆತ್ಮಹತ್ಯೆಗೆ ಯತ್ನ ಎಂದು ಹೇಳಿಕೆ ಬಿಡುಗಡೆ ಮಾಡಿದೆ ಎಂದು ಕುಟುಂಬ ಆರೋಪಿಸಿದೆ.
ಅನಂತ್‌ನಾಗ್‌ನಲ್ಲಿ ಕರ್ತವ್ಯದಲ್ಲಿದ್ದಾಗ ಕಸ್ವಾನ್ ಅವರ ತಲೆಗೆ ಗುಂಡು ತಗುಲಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಅಲ್ಲಿ ಅವರು ಸಾವನ್ನಪ್ಪಿರುವುದಾಗಿ ಘೋಷಿಸಲಾಗಿತ್ತು. ಈ ವಿಷಯದ ಬಗ್ಗೆ ಗಮನ ಹರಿಸಬೇಕು ಎಂದು ನಗೌರ್ ಸಂಸದ ಹನುಮಾನ್ ಬೇನಿವಾಲ್ ಅವರು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರನ್ನು ಒತ್ತಾಯಿಸಿದ್ದಾರೆ.
ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಫೋಸ್ಟ್ ಮಾಡಿರುವ ಬೇನಿವಾಲ್, ಬಿಕಾನೇರ್ ನ ನೋಖಾ ತಹಸಿಲ್‌ನಲ್ಲಿರುವ ರಾಂಚು ಗ್ರಾಮದ ರಾಮಸ್ವರೂಪ್ ಶ್ರೀನಗರದ ಅನಂತನಾಗ್‌ನಲ್ಲಿರುವ ಭಾರತೀಯ ಸೇನೆಯ 75 ನೇ ಸಶಸ್ತ್ರ ರೆಜಿಮೆಂಟ್‌ನಲ್ಲಿ ಉದ್ಯೋಗಿಯಾಗಿದ್ದರು. ನ್ಯಾಯಾಲಯದ ವಿಚಾರಣೆಯಿಲ್ಲದೆ ಯೋಧನ ಸಾವನ್ನು ಆತ್ಮಹತ್ಯೆ ಎಂದು ಘೋಷಿಸಿರುವುದು ಬಿಕಾನೇರ್‌ನ ಜಿಲ್ಲಾ ಸೈನಿಕ ಕಲ್ಯಾಣಾಧಿಕಾರಿಯ ಸಂಕುಚಿತ ಮನೋಭಾವವನ್ನು ತೋರಿಸುತ್ತದೆ.ರಕ್ಷಣಾ ಸಚಿವರು ತಕ್ಷಣವೇ ಆ ಅಧಿಕಾರಿಯನ್ನು ವಜಾಗೊಳಿಸಿ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಹಾಗೂ ಹಿರಿಯ ಸೇನಾ ಅಧಿಕಾರಿಗಳನ್ನು ಪ್ರಕರಣದ ನಿಷ್ಪಕ್ಷಪಾತ ತನಿಖೆಗೆ ಕಳುಹಿಸಬೇಕು ಎಂದು ಒತ್ತಾಯಿಸಿದ್ದಾರೆ.
Advertisement