ಒಡಿಶಾದ ಬಾಲಸೋರ್‌ನಲ್ಲಿ ಭೀಕರ ಅಪಘಾತ: ಪುರಿಗೆ ಹೊರಟಿದ್ದ ನಾಲ್ವರು ಯಾತ್ರಾರ್ಥಿಗಳು ಸಾವು, 16 ಮಂದಿಗೆ ಗಾಯ

55 ಯಾತ್ರಾರ್ಥಿಗಳು ಪುರಿ ಜಗನ್ನಾಥ ದೇಗುಲಕ್ಕೆ ತೆರಳುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಜಲೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯ ಚಾಲಂತಿ ಬೈಪಾಸ್‌ನಲ್ಲಿ 20 ಅಡಿ ಎತ್ತರದಿಂದ ಬಸ್ ಬಿದ್ದಿದೆ.
ಒಡಿಶಾದ ಬಾಲಸೋರ್‌ನಲ್ಲಿ ಭೀಕರ ಅಪಘಾತ: ಪುರಿಗೆ ಹೊರಟಿದ್ದ ನಾಲ್ವರು ಯಾತ್ರಾರ್ಥಿಗಳು ಸಾವು, 16 ಮಂದಿಗೆ ಗಾಯ
Updated on

ಬಾಲಸೋರ್: ಇಂದು ಶನಿವಾರ ನಸುಕಿನ ವೇಳೆ ಒಡಿಶಾ ರಾಜ್ಯದ ಬಾಲಸೋರ್ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ-16 ರಲ್ಲಿ ಸಂಭವಿಸಿದ ಭೀಕರ ಅಪಘಾತದಲ್ಲಿ ಉತ್ತರ ಪ್ರದೇಶದ ಮಹಿಳೆ ಸೇರಿದಂತೆ ಕನಿಷ್ಠ ನಾಲ್ವರು ಯಾತ್ರಿಕರು ಮೃತಪಟ್ಟಿದ್ದು, 16 ಮಂದಿ ಗಾಯಗೊಂಡಿದ್ದಾರೆ.

55 ಯಾತ್ರಾರ್ಥಿಗಳು ಪುರಿ ಜಗನ್ನಾಥ ದೇಗುಲಕ್ಕೆ ತೆರಳುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಜಲೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯ ಚಾಲಂತಿ ಬೈಪಾಸ್‌ನಲ್ಲಿ 20 ಅಡಿ ಎತ್ತರದಿಂದ ಬಸ್ ಭತ್ತದ ಬೆಳೆ ತುಂಬಿದ ಗದ್ದೆಯಲ್ಲಿ ಬಿದ್ದಿದೆ.

ಮೃತರನ್ನು ರಾಜ್ ಪ್ರಸಾದ್ ಯಾದವ್, ರಾಜೇಶ್ ಮಿಶ್ರಾ, ಶಾಂತಾರಾಮ್ ಯಾದವ್ ಮತ್ತು ಕಮಲಾ ದೇವಿ ಎಂದು ಗುರುತಿಸಲಾಗಿದೆ. ಏಳು ಯಾತ್ರಾರ್ಥಿಗಳ ಸ್ಥಿತಿ ಚಿಂತಾಜನಕವಾಗಿದೆ.

ಮಾಹಿತಿ ತಿಳಿದ ತಕ್ಷಣ ಸ್ಥಳೀಯ ಪೊಲೀಸರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬಸ್ಸಿನಡಿಯಲ್ಲಿ ಸಿಲುಕಿದ್ದ ಗಾಯಾಳುಗಳನ್ನು ರಕ್ಷಿಸಿದ್ದಾರೆ. ಎಲ್ಲಾ ಗಾಯಾಳುಗಳನ್ನು ಬಾಲಸೋರ್‌ನಲ್ಲಿರುವ ಫಕೀರ್ ಮೋಹನ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ರವಾನಿಸಲಾಗಿದೆ. ಬಸ್‌ನಲ್ಲಿ ಚಾಲಕ ಮತ್ತು ಸಹಾಯಕ ಸೇರಿದಂತೆ 57 ಜನರಿದ್ದರು.

ಯಾತ್ರಿಕರು ಸೆಪ್ಟೆಂಬರ್ 18 ರಂದು ಉತ್ತರ ಪ್ರದೇಶದಿಂದ ಹೊರಟಿದ್ದರು. ಬಿಹಾರ, ಜಾರ್ಖಂಡ್ ಮತ್ತು ಪಶ್ಚಿಮ ಬಂಗಾಳದ ಹಲವಾರು ಸ್ಥಳಗಳಿಗೆ ಭೇಟಿ ನೀಡಿದ್ದರು. ಅವಘಡ ಸಂಭವಿಸಿದಾಗ ಬಸ್ಸಿನಲ್ಲಿ ನಿದ್ದೆ ಮಾಡುತ್ತಿದ್ದರು. ಅಜಾಗರೂಕ ಚಾಲನೆಯು ಅಪಘಾತಕ್ಕೆ ಕಾರಣವಾಗಿರಬಹುದು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.

ಪ್ರಕರಣ ದಾಖಲಿಸಿಕೊಂಡು ಜೆಸಿಬಿ ಯಂತ್ರದ ಸಹಾಯದಿಂದ ವಾಹನವನ್ನು ಮೇಲಕ್ಕೆತ್ತಲಾಗಿದೆ ಎಂದು ಎಸ್‌ಡಿಪಿಒ ತಿಳಿಸಿದ್ದಾರೆ. ಬಸ್ ಮಾಲೀಕರು ಹಾಗೂ ಮೃತರ ಕುಟುಂಬಸ್ಥರಿಗೆ ಮಾಹಿತಿ ನೀಡಲಾಗಿದೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com